ಹೊಸದಿಗಂತ ವರದಿ ಅಂಕೋಲಾ:
ಬೈಕ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಮೃತಪಟ್ಟು ಹಿಂಬದಿಯ ಸವಾರ ಗಾಯಗೊಂಡ ಘಟನೆ ತಾಲೂಕಿನ ಶೆಟಗೇರಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದೆ.
ರಾಜಸ್ಥಾನದ ಪಾಲಿಯ ಮೂಲ ನಿವಾಸಿ ಹಾಲಿ ಕುಮಟಾ ಹೆಗಡೆಯಲ್ಲಿ ವಾಸವಾಗಿದ್ದ ಸುರೇಶ ಹರಿರಾಮ ಸೋಲಂಕಿ(55) ಮೃತ ವ್ಯಕ್ತಿಯಾಗಿದ್ದು ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಮುಕೇಶಕುಮಾರ ರಾವಲ್ (26) ಎಂಬಾತ ಗಾಯಗೊಂಡಿದ್ದಾನೆ.
ರಾಜಸ್ಥಾನದಿಂದ ಬಂದು ಕುಮಟಾದಲ್ಲಿ ವಾಸವಾಗಿ ಸ್ಟೀಲ್ ಫರ್ನಿಚರ್ ಕೆಲಸ ಮಾಡಿಕೊಂಡಿದ್ದ ಇವರು ಅಂಕೋಲಾ ಕಡೆಯಿಂದ ಕುಮಟಾ ಕಡೆ ಸಾಗುತ್ತಿದ್ದ ಸಂದರ್ಭದಲ್ಲಿ ಶೆಟಗೇರಿ ಕ್ರಾಸ್ ಬಳಿ ಹಿಂಬದಿಯಿಂದ ಓವರ್ ಟೇಕ್ ಮಾಡಿಕೊಂಡು ಬಂದ ಕೆ.ಎ20 ಎಎ 3824 ನೋಂದಣಿ ಸಂಖ್ಯೆಯ ಕಾರು ಚಾಲಕ ಬೈಕಿನ ಮುಂದೆ ಹೋಗಿ ಕಾರನ್ನು ಯಾವುದೇ ಸೂಚನೆ ನೀಡದೆ ಎಡಕ್ಕೆ ಬಂದು ಬೈಕ್ ಎದುರು ಕಾರು ನಿಲ್ಲಿಸಿದ ಪರಿಣಾಮ ಬೈಕು ಕಾರಿಗೆ ಹಿಂಬದಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಅಪಘಾತದಿಂದ ಡಿವೈಡರ್ ಮೇಲೆ ಬಿದ್ದು ತೀವ್ರ ಗಾಯಗೊಂಡ ಬೈಕ್ ಸವಾರನನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ಹಿಂಬದಿ ಸವಾರ ಚೇತರಿಸಿಕೊಳ್ಳುತ್ತಿದ್ದು ಆರೋಪಿತ ಕಾರು ಚಾಲಕ ಸುರೇಶ ತಿಮ್ಮಪ್ಪ ಎಂಬಾತನ ಮೇಲೆ ದೂರು ದಾಖಲಾಗಿದೆ. ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.