ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಮೇಲೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಎಲಿವೇಟೆಡ್ ಫ್ಲೈಓವರ್ ಅಧಿಕಾರಿ ಪಿ.ಮಂಜುನಾಥ್ (52) ಮೃತಪಟ್ಟಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಯ ಮುಖ್ಯ ರಸ್ತೆಯಲ್ಲಿ ತಡರಾತ್ರಿ ಕಾರು ಕೆಟ್ಟು ನಿಂತಿದೆ. ಟೋಯಿಂಗ್ ವೆಹಿಕಲ್ ಕರೆಸಿ ಫ್ಲೈಓವರ್ ಸಿಬ್ಬಂದಿ ತೆರವು ಮಾಡಿಸ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಟಾಟಾ ಏಸ್ ವಾಹನದಿಂದ ಸರಣಿ ಅಪಘಾತ ಸಂಭವಿಸಿದೆ.
ಫ್ಲೈಓವರ್ ಮೇಲೆ ಟಾಟಾ ಏಸ್ ವಾಹನ ಅಧಿಕಾರಿಯ ಕಾರಿಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಟಾಟಾ ಏಸ್ ವಾಹನ ಪಲ್ಟಿಯಾಗಿದೆ. ಈ ಅಪಘಾತದಲ್ಲಿ ಎರಡು ಕಾರುಗಳು ಸಂಪೂರ್ಣ ಜಖಂಗೊಂಡಿವೆ. ಈ ಘಟನೆಯಲ್ಲಿ ಮಂಜುನಾಥ್ ಹಾಗೂ ಆತನ ಮತ್ತೋರ್ವ ಸಹೋದ್ಯೋಗಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮಂಜುನಾಥ್ ಸಾವನ್ನಪ್ಪಿದ್ದಾರೆ. ಇನ್ನೋರ್ವ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಜುನಾಥ್ ಅವರ ಮಗಳ ಮದುವೆ ಆಗಸ್ಟ್ 10 ರಂದು ನಡೆಯಲಿದ್ದು, ಮಗಳ ಮದುವೆಗೆ ಸಿದ್ಧತೆ ನಡೆಸಿದ್ದ ಮಂಜುನಾಥ್ ನಿನ್ನೆ ಮದುವೆಯ ಆಮಂತ್ರಣ ಪತ್ರಿಕೆ ಹಂಚಿದ್ದಾರೆ. ರಾತ್ರಿ ಪಾಳಿಯ ವೇಳೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮದುವೆ ನಡೆಯುವ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.