ಹೊಸದಿಗಂತ ವರದಿ ಯಾದಗಿರಿ:
ಜಮೀನಿಗೆ ಸಂಪರ್ಕ ಕಲ್ಪಿಸುವ ದಾರಿ ವಿಚಾರದ ಕುಟುಂಬದೊಳಗಿನ ಗಲಾಟೆ ಭೀಕರ ತಿರುವು ಪಡೆದಿದ್ದು, ಯುವಕನ ಹತ್ಯೆ ಮಾಡಲಾಗಿದೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಾವಿನಮಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ.
ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು ಮೃತ ಯುವಕನನ್ನು ಪರಮೇಶಿ ತಂದೆ ಮಲ್ಲಣ್ಣ ಗಿಂಡಿ (27) ಎಂದು ಗುರುತಿಸಲಾಗಿದೆ. ಜಮೀನಿನ ದಾರಿ ವಿಚಾರವಾಗಿ ಕುಟುಂಬದೊಳಗೆ ಹುಟ್ಟಿಕೊಂಡಿದ್ದ ವೈಷಮ್ಯ ಕ್ಷುಲ್ಲಕ ಕಾರಣದಿಂದಾಗಿ , ನಂತರ ಕೊಲೆ ಮಾಡುವ ಹಂತಕ್ಕೆ ತಲುಪಿದೆ. ಮಾರಕಾಸ್ತ್ರಗಳನ್ನು ಬಳಸಿಕೊಂಡು ಆರೋಪಿಗಳು ಪರಮೇಶಿ ಮೇಲೆ ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕೆಂಭಾವಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



