ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್ ಪಕ್ಷದೊಳಗೆ ಗಂಭೀರ ರಾಜಕೀಯ ತಾಳಮೇಳದ ಕೊರತೆ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಲೇವಡಿ ಮಾಡಿದ್ದಾರೆ. ಕಲಬುರಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಪದಕ್ಕಾಗಿ ಪೈಪೋಟಿ ನಡೆಯುತ್ತಿದೆ. ಇದು ಕೇವಲ ಅಧಿಕಾರದ ಕುದರೆ ವ್ಯಾಪಾರ,” ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅವರ ಸಿಎಂ ಕುರ್ಚಿ ಯಾವಾಗ ಅಲ್ಲಾಡುತ್ತದೋ, ಅವಾಗೆಲ್ಲಾ ಅವರು ಸಮಾವೇಶಗಳನ್ನು ನಡೆಸುತ್ತಿದ್ದಾರೆ. ಈಗ ಮೈಸೂರಿನಲ್ಲಿ ಕೂಡ ಅವರು ಸಮಾವೇಶ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅಂದ್ರೆ ಸಮಾವೇಶ, ಸಮಾವೇಶ ಅಂದ್ರೆ ಸಿದ್ದರಾಮಯ್ಯ ಅನ್ನೋದು ಈಗ ಸಾಮಾನ್ಯವಾಗಿದೆ ಎಂದು ಅವರು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಅಹಿಂದ್ ಸಮುದಾಯವನ್ನು ಮುಂದಿಟ್ಟುಕೊಂಡು ಹೈಕಮಾಂಡ್‌ಗೆ ಬೆದರಿಕೆ ಹಾಕುತ್ತಿದ್ದಾರೆ. ಪಾಲನೆಯ ಸಾಧನೆ ಶೂನ್ಯವಾಗಿದೆ. ಈ ಸರ್ಕಾರ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ರಣದೀಪ್ ಸುರ್ಜೆವಾಲಾ ಅವರು ಪದೇ ಪದೇ ರಾಜ್ಯಕ್ಕೆ ಬಂದು ಶಾಸಕರ ಅಸಮಾಧಾನ ಬಗೆಹರಿಸುವ ಅವಶ್ಯಕತೆ ಇರುತ್ತಿರಲಿಲ್ಲ, ಎಂದರು.
ಕಾಂಗ್ರೆಸ್ ಸರ್ಕಾರ ಎರಡು ವರ್ಷಗಳಲ್ಲಿ ಬಿಜೆಪಿ ನಾಯಕರನ್ನು ಗುರಿಯಾಗಿಸಿಕೊಂಡು ಭಯಹುಟ್ಟಿಸುವ ಕೆಲಸಕ್ಕೆ ಮುಂದಾಗಿದೆ ಎಂದು ಆರೋಪಿಸಿದರು. ದಕ್ಷಿಣ ಕನ್ನಡದ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರನ್ನು ಬಂಧಿಸಲು ಯತ್ನಿಸಲಾಗಿದೆ. ಬಳಿಕ ಭರತ್ ಶೆಟ್ಟಿಯವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದೇ ರೀತಿಯಾಗಿ ಹಿಂದುಳಿದ ವರ್ಗದ ನಾಯಕ ಭೈರತಿ ಬಸವರಾಜರನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೆಯುತ್ತಿದೆ. ಆದರೆ ಅವರ ವಿರುದ್ಧ ಯಾವುದೇ ಪುರಾವೆ ಇಲ್ಲ. ದೂರು ನೀಡಿದ ಮಹಿಳೆಯು ಕೂಡ ಭೈರತಿ ಅವರ ಹೆಸರನ್ನು ಉಲ್ಲೇಖಿಸಲಿಲ್ಲ, ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.