ಮಳೆ ಬಂದು ತಂಪಾಗಿರೋ ವಾತಾವರಣದಲ್ಲಿ ಬಿಸಿಬಿಸಿ ತಿಂಡಿಯ ಆಸೆ ಎಲ್ಲರಿಗೂ ಸಾಮಾನ್ಯ. ಇಂತಹ ಸಮಯದಲ್ಲಿ ರುಚಿಕರವಾಗಿಯೂ ಆರೋಗ್ಯಕರವಾಗಿಯೂ ಸೇವಿಸಬಹುದಾದ ಆಲೂ ಪಾಲಕ್ ಕಟ್ಲೆಟ್ ಒಂದು ಅತ್ಯುತ್ತಮ ಆಯ್ಕೆ. ಈ ಕಟ್ಲೆಟ್ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರಿಗೂ ಇಷ್ಟವಾಗುತ್ತದೆ. ಇದನ್ನು ಮಾಡುವುದು ಕೂಡ ಅಷ್ಟು ಕಷ್ಟವಲ್ಲ.
ಬೇಕಾಗುವ ಸಾಮಗ್ರಿಗಳು:
ಆಲೂಗಡ್ಡೆ – 2
ಪಾಲಕ್ ಸೊಪ್ಪು – 1 ಕಪ್
ಈರುಳ್ಳಿ – 1
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಜೀರಿಗೆ – 1/4 ಚಮಚ
ಗರಂ ಮಸಾಲಾ – 1 ಚಮಚ
ಅರಿಶಿನ ಪುಡಿ – ಒಂದು ಚಿಟಿಕೆ
ಅಕ್ಕಿ ಹಿಟ್ಟು – 1 ಚಮಚ
ಮೆಣಸಿನ ಪುಡಿ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ:
ಮೊದಲು ಆಲೂಗಡ್ಡೆಗಳನ್ನು ನೀರಿನಲ್ಲಿ ಬೇಯಿಸಿ, ಸಿಪ್ಪೆ ತೆಗೆದು ಮ್ಯಾಶ್ ಮಾಡಿ. ಪಾಲಕ್ ಸೊಪ್ಪು ಹಾಗೂ ಈರುಳ್ಳಿ ತೊಳೆದು ಸಣ್ಣದಾಗಿ ಕತ್ತರಿಸಿ ಇಡಬೇಕು. ಒಂದು ದೊಡ್ಡ ಬೌಲ್ ಗೆ ಬೇಯಿಸಿದ ಆಲೂಗಡ್ಡೆ ಮ್ಯಾಶ್ ಮಾಡಿ, ಅದಕ್ಕೆ ಈರುಳ್ಳಿ, ಪಾಲಕ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಜೀರಿಗೆ, ಗರಂ ಮಸಾಲಾ, ಅರಿಶಿನ, ಮೆಣಸಿನ ಪುಡಿ, ಅಕ್ಕಿ ಹಿಟ್ಟು ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ನಿಮಗೆ ಬೇಕಾದ ಆಕಾರಕ್ಕೆ ಮಾಡಿಕೊಳ್ಳಿ.
ಈಗ ಒಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಎಣ್ಣೆ ಬಿಸಿ ಮಾಡಿ ತಯಾರಿಸಿದ ಕಟ್ಲೆಟ್‌ಗಳನ್ನು ಹಾಕಿ, ಎರಡು ಬದಿಯೂ ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿದರೆ ಬಿಸಿಬಿಸಿ ಆಲೂ ಪಾಲಕ್ ಕಟ್ಲೆಟ್ ಸವಿಯಲು ಸಿದ್ಧ.
ಇದನ್ನು ಟೊಮಾಟೊ ಸಾಸ್ ಅಥವಾ ಪುದೀನಾ ಚಟ್ನಿಯೊಂದಿಗೆ ಸವಿಯಬಹುದು.