ಹೊಸದಿಗಂತ ವರದಿ ಹುಬ್ಬಳ್ಳಿ:
ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಮನೆಗಳ ಕಳವು ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಿದ ಪೊಲೀಸರು ಅವರಿಂದ ೯ ಲಕ್ಷ ರೂ. ಮೌಲ್ಯ ಆಭರಣ ಹಾಗೂ ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ.
ಕುಂದಗೋಳ ತಾಲೂಕಿನ ಗುಡಗೇರಿ ಶ್ರೀಧರ ಬಿಂಜಡಗಿ(೨೭), ಹೇಮಂತ ಧರೆಣ್ಣವರ(೩೪) ಹಾಗೂ ಗೆಬಿ ಫರ್ನಾಂಡೀಸ್ ಪಾವಲು( ೩೧) ಬಂಧಿತರು.
ತಾಲೂಕಿನ ತಾರಿಹಾಳ ಗ್ರಾಮದ ಸೈದುಸಾಬ ನದಾಫ್ ಎಂಬುವರ ಮನೆಯ ಬೀಗ ಮುರಿದ ಕಳ್ಳರು ಮನೆಯಲಿದ್ದ ಬಂಗಾರ, ಬೆಳ್ಳಿಯ ಆಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದರು. ಅದೇ ರೀತಿ ಅಂಚಗೇರಿ ಗ್ರಾಮದ ಗೋಡಾವನ್ ಆಶ್ರಯ ಪ್ಲಾಟದಲ್ಲಿರುವ ಮಂಜುನಾಥ ಜಗಲಾರ ಎಂಬ ಮನೆಯಲ್ಲಿ ಇಟ್ಟಿದ್ದ ೧.೪೨ ಲಕ್ಷ ರೂ. ಮೌಲ್ಯ ವಸ್ತುಗಳ ಕಳವು ಮಾಡಿದ್ದರು. ಈ ಎರಡು ಪ್ರತ್ಯೇಕ ಪ್ರಕರಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದವು.
ಪ್ರಕರಣ ತನಿಖೆ ಕೈಗೊಂಡ ಗ್ರಾಮೀಣ ಇನ್ಸ್ ಪೆಕ್ಟರ್ ಮುರಗೇಶ ಚಣ್ಣನವರ ನೇತೃತ್ವದ ತಂಡ ಆರೋಪಿಗಳ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಿಎಸ್ಐ ಸಚಿನ್ ಆಲಮೇಲಕರ್, ಎಎಸ್ಐ ಎನ್. ಎಂ. ಹೊನ್ನಪ್ಪನವರ, ಸಿಬ್ಬಂದಿ ಎ. ಎ. ಕಾಕರ್, ಹೆಚ್ ಬಿ ಐಹೋಳೆ, ಹೆಚ್ ಎಲ್ ಮಲ್ಲಿಗವಾಡ, ಸಂತೋಷ ಚವ್ಹಾಣ, ಚನ್ನಪ್ಪ ಬಳ್ಕೊಳ್ಳಿ, ಮಹಾಂತೇಶ ಮದ್ದಿನ್, ಗಿರೀಶ ತಿಪ್ಪಣ್ಣವರ, ವಿಶ್ವನಾಥ ಬಡಿಗೇರ ತಂಡದಲ್ಲಿದ್ದಾರೆ.