Friday, November 14, 2025

12 ಜನರ ಸಾವಿಗೆ ಕಾರಣವಾದ ಪುಲ್ವಾಮಾದ ಶಂಕಿತ ಆರೋಪಿ ಡಾ. ಉಮರ್ ನಬಿ ಮನೆ ಧ್ವಂಸ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೆಹಲಿಯ ಕೆಂಪು ಕೋಟೆ ಸಮೀಪದಲ್ಲಿ ಪ್ರಬಲ ಕಾರು ಸ್ಫೋಟದ ಶಂಕಿತ ಆರೋಪಿ ಡಾ. ಉಮರ್ ನಬಿ ಮನೆಯನ್ನು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಧ್ವಂಸಗೊಳಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ರಾತ್ರಿಯಿಡೀ ನಡೆದ ಪ್ರಮುಖ ಕಾರ್ಯಾಚರಣೆಯಲ್ಲಿ ಡಾ. ಉಮರ್ ನಬಿ ಮನೆಯನ್ನು ಅಧಿಕಾರಿಗಳು ನೆಲಸಮ ಮಾಡಿದ್ದಾರೆ.

ಸ್ಫೋಟದ ನಂತರ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ರಾತ್ರಿಯಿಡೀ ದಾಳಿ ನಡೆಸಿ, ಡಾ. ಉಮರ್ ಅವರ ಕುಟುಂಬದ ಮೂವರು ಸದಸ್ಯರು ಸೇರಿದಂತೆ ಆರು ಜನರನ್ನು ಬಂಧಿಸಿದ್ದಾರೆ. ಸ್ಫೋಟ ಸ್ಥಳದಿಂದ ಸಂಗ್ರಹಿಸಲಾದ ಡಿಎನ್‌ಎ ಮಾದರಿಗಳು ಉಮರ್‌ನ ತಾಯಿಯ ಡಿಎನ್‌ಎ ಮಾದರಿಗಳೊಂದಿಗೆ ಹೊಂದಿಕೆಯಾದ ನಂತರ ಅವನ ಗುರುತು ದೃಢಪಟ್ಟಿತು.

ಸ್ಫೋಟದ ವೇಳೆ ಕಾರಿನಲ್ಲಿ ಉಮರ್‌ ಒಬ್ಬನೇ ಇದ್ದ ಎಂಬುದನ್ನೂ ತನಿಖಾಧಿಕಾರಿಗಳು ದೃಢಪಡಿಸಿದ್ದಾರೆ. ನ.10ರಂದು ಕೆಂಪು ಕೋಟೆ ಸಮೀಪದಲ್ಲಿ ಸಂಭವಿಸಿದ್ದ ಕಾರು ಸ್ಫೋಟದಲ್ಲಿ 12 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.

error: Content is protected !!