January21, 2026
Wednesday, January 21, 2026
spot_img

ದೇವರ ದೀಪದಿಂದ ಮನೆಗೆ ಬೆಂಕಿ: ಲಕ್ಷಾಂತರ ರೂ ಮೌಲ್ಯದ ಸೊತ್ತು ಭಸ್ಮ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ನಂದನಗದ್ದಾ ಪ್ರದೇಶದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಮನೆ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ದೇವರ ಕೋಣೆಯಲ್ಲಿ ಹಚ್ಚಿದ ದೀಪದಿಂದ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳು ಸುಟ್ಟು ಭಸ್ಮವಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಶಾಂತರಾಮ ದತ್ತ ದೇಸಾಯಿ ಎಂಬವರಿಗೆ ಸೇರಿದ ಈ ಮನೆಯಲ್ಲಿ ಶನಿವಾರ ಸಂಜೆ ದೇವರಿಗೆ ದೀಪ ಹಚ್ಚಿದ ಬಳಿಕ ಅವರು ಮನೆ ಬಿಟ್ಟು ಹೊರಗೆ ತೆರಳಿದ್ದರು. ಆದರೆ ಕೆಲವೇ ಕ್ಷಣಗಳಲ್ಲಿ ದೀಪದಿಂದ ಉಂಟಾದ ಬೆಂಕಿಯ ಕಿಡಿ ಇಡೀ ಮನೆಗೆ ವ್ಯಾಪಿಸಿದ್ದು, ಮನೆ ಒಳಗಿನ ಪೀಠೋಪಕರಣಗಳು, ವಸ್ತುಗಳು ಹಾಗೂ ದಾಖಲೆಗಳು ಬೆಂಕಿಗೆ ಆಹುತಿಯಾಗಿವೆ.

ಘಟನೆಯನ್ನು ಗಮನಿಸಿದ ನೆರೆಮನೆಯವರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಕಾರವಾರ ಅಗ್ನಿಶಾಮಕ ಸಿಬ್ಬಂದಿ ಕೂಡ ಸ್ಥಳಕ್ಕೆ ತ್ವರಿತವಾಗಿ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು. ಆದರೆ, ಬೆಂಕಿಯ ತೀವ್ರತೆಯಿಂದಾಗಿ ಮನೆಯ ಸುಮಾರು ಭಾಗ ಸುಟಿ ಭಸ್ಮವಾಗಿದೆ.

ಘಟನೆಯ ಬಗ್ಗೆ ಕಾರವಾರ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಾಥಮಿಕ ತನಿಖೆಯಲ್ಲಿ ದೇವರ ದೀಪವೇ ಈ ಘಟನೆಗೆ ಕಾರಣವಾಗಿದೆ ಎಂಬುದು ತಿಳಿದು ಬಂದಿದೆ. ದೇಸಾಯಿ ಕುಟುಂಬ ಭಾರೀ ಆರ್ಥಿಕ ನಷ್ಟ ಅನುಭವಿಸಿದ್ದು, ಘಟನೆ ಸ್ಥಳೀಯರಲ್ಲೂ ಆತಂಕ ಸೃಷ್ಟಿಸಿದೆ.

Must Read