ಹೊಸದಿಗಂತ ವರದಿ ಮಂಡ್ಯ :
ಮನೆಗಳಿಗೆ ಕನ್ನ ಹಾಕಿ ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ನಾಗಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿ ಆತನಿಂದ 490 ಗ್ರಾಂ ತೂಕದ 40 ಲಕ್ಷ ರೂ. ವೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಾಸನ ಜಿಲ್ಲೆ, ಆಲೂರು ತಾಲೂಕಿನ ಮುದಿಗೆರೆ ಗ್ರಾಮದ ಎಂ.ವಿ. ರಂಗೇಗೌಡ ಅಲಿಯಾಸ್ ಸಂತೋಷ ಅಲಿಯಾಸ್, ಐಪಿಎಲ್ ಸಂತೋಷ್ (37) ಎಂಬಾತನೆ ಬಂಧಿತ ಆರೋಪಿ.
ಈತ ಹಗಲು ಹೊತ್ತಿನಲ್ಲಿ ಬೀಗ ಹಾಕಿರುವ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದನೆಂದು ತಿಳಿದುಬಂದಿದೆ. ಅದೇ ರೀತಿ ಮೇ. 18ರಂದು ಬೆಳಗ್ಗೆ 10.30ರಿಂದ 12 ಗಂಟೆ ನಡುವೆ ಮನೆಯ ಮುಂದೆ ಇಟ್ಟಿದ್ದ ಬೀಗದ ಕೀಲಿ ತೆಗೆದುಕೊಂಡು ನಾಗಮಂಗಲ ತಾಲೂಕು ಬಿದರಕೆರೆ ಗ್ರಾಮದ ರಂಗೇಗೌಡ ಎಂಬುವ ಮನೆಯಲ್ಲಿದ್ದ 20 ಗ್ರಾಂ ಚಿನ್ನಾಭರಣ ಹಾಗೂ 97 ಸಾವಿರ ರೂ. ನಗದು ಹಣವನ್ನು ದೋಚಿದ್ದನು.