ಉಳ್ಳಾಲದಲ್ಲಿ ಮನೆ ಗೋಡೆ ಕುಸಿತ: ಒಂದೇ ಕುಟುಂಬದ ನಾಲ್ವರ ದಾರುಣ ಅಂತ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕಂಪೌಂಡ್ ಗೋಡೆ ಮನೆಯ ಮೇಲ್ಗಡೆ ಉರುಳಿ ಬಿದ್ದು ಒಂದೇ ಕುಟುಂಬದ ನಾಲ್ವರು ಮಲಗಿದ್ದಲ್ಲೇ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ಮದನಿನಗರ ಎಂಬಲ್ಲಿ ನಸುಕಿನ ಜಾವ ಸಂಭವಿಸಿದೆ.

ಮನೆಯಲ್ಲಿ ವಾಸ್ತವ್ಯವಿದ್ದ ಯಾಸಿರ್ (45), ಅವರ ಪತ್ನಿ ಮರಿಯಮ್ಮ (40) ಮತ್ತು ಇಬ್ಬರು ಮಕ್ಕಳಾದ ರಿಹಾನ (11) ಮತ್ತು ರಿಫಾನ (17) ಮೃತಪಟ್ಟಿದ್ದಾರೆ.

ಪಕ್ಕದ ಮನೆಯ ಅಬೂಬಕ್ಕರ್ ಎಂಬವರಿಗೆ ಸೇರಿದ ಮನೆಯ ಗೋಡೆ, ಕುಸಿದು ದುರಂತ ಸಂಭವಿಸಿದೆ.

ಯಾಸೀರ್ ಮಂಗಳೂರಿನ ಬಂದರು ದಕ್ಕೆಯಲ್ಲಿ ಮಡ್ಡಿ ಆಯಿಲ್ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ನಿನ್ನೆ ರಾತ್ರಿ ಊಟ ಮುಗಿಸಿ ಮನೆಯ ಕೋಣೆಯಲ್ಲಿ ಮಲಗಿದ್ದ ಇಬ್ಬರು ಪುತ್ರಿಯರು ಹಾಗೂ ದಂಪತಿ ಬೆಳಗ್ಗಿನ ಜಾವ ಮನೆಯ ಮೇಲೆ ಬಿದ್ದ ಕಾಂಪೌಂಡ್ ಗೋಡೆಯಿಂದಾಗಿ ಸ್ಥಳದಲ್ಲೇ ಸಾವು ಕಂಡಿದ್ದಾರೆ. ರಾತ್ರಿಯಿಡೀ ಮಳೆಯಾದ ಪರಿಣಾಮ ಕಂಪೌಂಡ್ ವಾಲ್ ಹಾಗೂ ಎರಡು ಅಡಿಕೆ ಮರಗಳು ಯಾಸಿ‌ರ್ ಅವರ ಮನೆಯ ಮೇಲೆ ಉರುಳಿಬಿದ್ದಿದೆ.
ರಿಹಾನಾ ಹಾಗೂ ರಿಫಾನ ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಾಲೆ ಹಾಗೂ ಕಾಲೇಜಿಗೆ ತೆರಳುತ್ತಿದ್ದರು.

ಆರು ವರ್ಷಗಳ ಹಿಂದೆ ಮನೆ ಖರೀದಿಸಿದ್ದ ಇವರು ಒಂದು ವರ್ಷ ಮನೆಯನ್ನು ಲೀಸ್ ಗೆ ನೀಡಿ ಆರು ತಿಂಗಳ ಹಿಂದಷ್ಟೇ ಮನೆಗೆ ವಾಪಸ್ಸಾಗಿದ್ದರು. ಎರಡು ವರ್ಷಗಳ ಹಿಂದೆಯೂ ಮನೆಯ ಮೇಲೆ ಇದೇ ರೀತಿ ಕಂಪೌಂಡ್ ಗೋಡೆ ಕುಸಿದಿದ್ದು, ಯಾವುದೇ ಅಪಾಯವಾಗಿರಲಿಲ್ಲ.

ಮೂರು ಗಂಟೆಗಳ ಕಾರ್ಯಾಚರಣೆ ಬಳಿಕ ನಾಲ್ಕು ಮೃತದೇಹಗಳನ್ನು ಹೊರತೆಗೆಯಲಾಗಿದೆ.ಸ್ಥಳೀಯರು ಮೂರು ಮೃತದೇಹಗಳನ್ನು ಅವಶೇಷಗಳಡಿಯಿಂದ ಹೊರತೆಗೆದರೆ, ಅಗ್ನಿಶಾಮಕ ದಳ ಸ್ಥಳೀಯರ ಜೊತೆ ಸೇರಿ ಎರಡು ಗಂಟೆ ಕಾರ್ಯಾಚರಣೆ ನಡೆಸಿ ಮತ್ತೊಂದು ಹೆಣ್ಮಗಳ ಮೃತದೇಹವನ್ನು ಹೊರತೆಗೆದಿದ್ದಾರೆ.

ದೊಡ್ಡಮಗಳು ರಶೀನಾ ಕಾಸರಗೋಡು ಕಡೆಗೆ ವಿವಾಹ ಮಾಡಲಾಗಿದ್ದು, ಬಕ್ರೀದ್ ಹಬ್ಬಕ್ಕೆಂದು ಬಂದವರು ನಿನ್ನೆಯಷ್ಟೇ ಗಂಡನ ಮನೆಗೆ ವಾಪಸ್ಸಾಗಿದ್ದರು. ಹೀಗಾಗಿ ಆಕೆ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!