ಹೊಸದಿಗಂತ ವರದಿ,ಹಳಿಯಾಳ :
ಪಟ್ಟಣದ ಹೃದಯ ಭಾಗದಲ್ಲಿರುವ ಸುರೇಂದ್ರ ಮಹಾಲೆ ಎನ್ನುವ ವ್ಯಕ್ತಿಯ ಮನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ
ಅಗ್ನಿ ಅವಘಡ ಸಂಭವಿಸಿದ್ದು ಮನೆಯ ಸಾಮಾನುಗಳು ಭಸ್ಮವಾಗಿವೆ.
ಮನೆಯು ಹಳೆಯದಾಗಿದ್ದು ಸಂಪೂರ್ಣ ಕಟ್ಟಿಗೆಯಿಂದ ನಿರ್ಮಾಣವಾಗಿದ್ದುದರಿಂದ ಅಗ್ನಿಯ ಕೆನ್ನಾಲಿಗೆ ಭಯಂಕರವಾಗಿತ್ತು.
ಅಕ್ಕ ಪಕ್ಕದ ನಾಲ್ಕು ಅಂಗಡಿಗಳು ಅಪಾರ ಪ್ರಮಾಣದ ಹಾನಿಗೊಳಗಾಗಿದೆ. ಅಲ್ಲದೆ ಭಯಂಕರ ಮಳೆಯ ನಡುವೆಯೂ ನಿಲ್ಲದ ಬೆಂಕಿಯಿಂದಾಗಿ ಭಯದ ವಾತಾವರಣ ಪರಿಸರದೆಲ್ಲೆಡೆ ನಿರ್ಮಾಣವಾಗಿದ್ದು ಮನೆಯ ಒಳ ಪ್ರವೇಶ ಕೂಡ ಅತೀ ಕಷ್ಟಕರ ಸವಾಲಿನದ್ದಾಗಿದೆ. ಮನೆಯ ನಿರ್ಮಾಣ ವೇಳೆ ಎಲ್ಲಿಯೂ ಕಿಡಕಿಗಳ ವ್ಯವಸ್ಥೆ ಇಲ್ಲದ ಕಾರಣ ಬೆಂಕಿ ಮತ್ತು ಹೊಗೆಯಿಂದಾಗಿ ಉಸಿರಾಡಲು ಕೂಡ ಸಮಸ್ಯೆ ಎದುರಾಗಿತ್ತು.
ಬೆಂಕಿ ನಂದಿಸಲು ಅಗ್ನಿಶಾಮಕ ದಳ ಹಾಗೂ ಪೋಲೀಸ್ ಸಿಬ್ಬಂಧಿ ಹರಸಾಹಸ ಪಡುತ್ತಿದ್ದು ಅಪಾಯವನ್ನು ಲೆಕ್ಕಿಸದೇ ಬೆಂಕಿಯನ್ನು ನಂದಿಸಲು ಸತತ ಪ್ರಯತ್ನದಲ್ಲಿದ್ದಾರೆ. ಅವಘಡದ ವೇಳೆ ಮನೆಯಲ್ಲಿ ಯಾರೂ ಇಲ್ಲದಿರುವುದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಅತಿ ಇಕ್ಕಟ್ಟಾದ ಮನೆಯ ನಿರ್ಮಾಣ ಅವಘಡದ ತೀವ್ರತೆಗೆ ಕಾರಣವಾಗಿದೆ. ಸತತ ಎರಡು ಘಂಟೆಗಳ ಪರಿಶ್ರಮದ ನಡುವೆ ಬೆಂಕಿಯನ್ನು ಒಂದು ಪ್ರಮಾಣದಲ್ಲಿ ತಹಬಂದಿಗೆ ತಂದಿದ್ದು ಸಂಪೂರ್ಣ ತಹಬಂದಿಗೆ ತರಲು ಇನ್ನೂ ಮೂರ್ನಾಲ್ಕು ತಾಸುಗಳಾದರೂ ಬೇಕಾಗುವ ಸಂಭವವಿದೆ ಎಂದು ಸ್ಥಳದಲ್ಲಿದ್ದು ಮೇಲ್ವಿಚಾರಣೆಯಲ್ಲಿ ತೊಡಗಿದ್ದ ಅಗ್ನಿ ಶಾಮಕ ಅಧಿಕಾರಿ ಮತ್ತು ಪೋಲೀಸ್ ಸಬ್ ಇನ್ಸಪೆಕ್ಟರ್ ತಿಳಿಸಿದ್ದಾರೆ.