ಅವತ್ತು ಉಪಸಭಾಪತಿಗಳನ್ನು ಗುರಿಯಾಗಿಸಿ ಪೇಪರ್ ವೇಟ್ ಎಸೆಯಲೆತ್ನಿಸಿದ್ದ ಜಮೀರ್: ಯೋಗೀಶ್ ಭಟ್ ಸಂದರ್ಶನ

ಹೊಸದಿಗಂತ ವರದಿ ಮಂಗಳೂರು :

ವಿಧಾನಸಭಾ ಕಲಾಪದ ವೇಳೆ ಬುಧವಾರ ಬಿಜೆಪಿಯ 10 ಮಂದಿ ಶಾಸಕರನ್ನು ಅಮಾನತುಗೊಳಿಸಿರುವ ಸ್ಪೀಕರ್ ನಿರ್ಧಾರ ಕಾಂಗ್ರೆಸ್ ಸರಕಾರದ ‘ಹಿಟ್ಲರ್‌ಶಾಹಿ’ನೀತಿ ಎಂಬುದಾಗಿ ಅಸಮಾಧಾನದ ಮಾತುಗಳು ಕೇಳಿಬರುತ್ತಿವೆ. ಈ ಹಿಂದೆ ವಿಧಾನಸಭೆಯ ಉಪಸಭಾಧ್ಯಕ್ಷರಾಗಿದ್ದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಹಿರಿಯ ರಾಜಕಾರಣಿ ಎನ್.ಯೋಗೀಶ್ ಭಟ್ ಅವರು ತಮ್ಮ ಅವಧಿಯಲ್ಲಿ ಯಾವ ರೀತಿ ಕಲಾಪಗಳು ನಡೆಯುತ್ತಿದ್ದವು? ಗದ್ದಲ ಗಲಾಟೆ ನಡೆದರೂ ಅದರ ಅಂತ್ಯ ಹೇಗಾಗುತ್ತಿತ್ತು ಎಂಬುದರ ಮಾಹಿತಿಯನ್ನು ‘ ಹೊಸ ದಿಗಂತ’ದೊಂದಿಗೆ ಹಂಚಿಕೊಂಡಿದ್ದಾರೆ.

ದಶಕದ ಹಿಂದಿನ ಕಲಾಪದ ದಿನಗಳನ್ನು ನೆನಪಿಸಿಕೊಂಡ ವಿಧಾನಸಭಾ ಮಾಜಿ ಉಪಸಭಾಧ್ಯಕ್ಷ ಯೋಗೀಶ್ ಭಟ್..

ವಿಧಾನಸಭಾ ಉಪಸಭಾಧ್ಯಕ್ಷರತ್ತ ಪೇಪರ್ ಎಸೆದರು ಎಂಬ ಕಾರಣವನ್ನು ಮುಂದಿಟ್ಟುಕ್ಕೊಂಡು ಶಾಸಕರನ್ನು ಸಸ್ಪೆಂಡ್ ಮಾಡಿರುವುದು ಸಮಂಜಸವಲ್ಲ, ಕಾನೂನುಬದ್ಧವೂ ಅಲ್ಲ. ‘ಸತತವಾಗಿ ನಾಲ್ಕು ಬಾರಿ ಶಾಸಕನಾಗಿ ವಿಧಾನಸಭೆಯ ಕಲಾಪಗಳಲ್ಲಿ ಭಾಗವಹಿಸಿದ್ದೇನೆ. ಆದರೆ ಈ ರೀತಿಯ ನಡೆಯನ್ನು ಎಂದೂ ಕಂಡಿಲ್ಲ. ಯು.ಟಿ.ಖಾದರ್ ಅವರು, ಸ್ವಲ್ಪ ತಾಳ್ಮೆಯಿಂದ, ಸಂಯಮದಿಂದ ವರ್ತಿಸಬೇಕಿತ್ತು. ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಿತ್ತು. ಆದರೆ ಖಾದರ್ ಅವರು ಈ ನಿಟ್ಟಿನಲ್ಲಿ ಸೋತಿದ್ದಾರೆ ಎಂದಿದ್ದಾರೆ.

ಅಂದು ಹಲ್ಲೆಗೆ ಮುಂದಾಗಿದ್ದರು
ಬಿಜೆಪಿ ಆಡಳಿತವಿದ್ದ ಸಂದರ್ಭದಲ್ಲಿ ಕಲಾಪದ ವೇಳೆ ಕಾಂಗ್ರೆಸ್ ಹದ್ದುಮೀರಿ ವರ್ತಿಸಿದ್ದಿದೆ. ಆದರೆ ಅಮಾನತುಗೊಳಿಸುವ ಕೆಲಸಕ್ಕೆ ಆಡಳಿತ ಪಕ್ಷದ ಸ್ಪೀಕರ್ ಮುಂದಾಗಿರಲಿಲ್ಲ. ಪ್ರಸ್ತುತ ಮಂತ್ರಿಯಾಗಿರುವ ಜಮೀರ್ ಅಹ್ಮದ್ ಖಾನ್ ಅವರು ಒಂದೊಮ್ಮೆ ಸ್ಪೀಕರ್ ಚುನಾವಣೆ ವೇಳೆ ಪೇಪರ್ ವೈಟ್ ಕಲ್ಲನ್ನು ಹಿಡಿದು ತನ್ನತ್ತ ಗುರಿ ಇಟ್ಟಿದ್ದರು. ಈ ದಿನಗಳನ್ನು ಖಾದರ್ ಅವರು ಮರೆತಂತಿದೆ ಎಂದಿದ್ದಾರೆ.

ಅಂದೇನಾಗಿತ್ತು?
2010ರಲ್ಲಿ ಸ್ಪೀಕರ್ ಚುನಾವಣೆ ನಡೆದಿತ್ತು. ರಾಜ್ಯಪಾಲರ ಆದೇಶದ ಮೇರೆಗೆ ಕೊಟ್ಟ ದಿನಾಂಕದಂದೇ ಕಾನೂನು ಪ್ರಕಾರ ಚುನಾವಣಾ ಕಲಾಪ ನಡೆಸಬೇಕಿತ್ತು. ಅದರ ಪ್ರಿಸೈಡಿಂಗ್ ಆಫೀಸರ್ ಆಗಿ ಅಧ್ಯಕ್ಷನಾಗಿ ಸ್ಪೀಕರ್ ಖುರ್ಚಿಯಲ್ಲಿ ನಾನು ಕುಳಿತು ಸಭೆ ನಡೆಸುತ್ತಿದ್ದೆ. ಆ ಸಂದರ್ಭ ಪ್ರತಿಪಕ್ಷದಲ್ಲಿದ್ದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಯು.ಟಿ.ಖಾದರ್ ನೇತೃತ್ವದ ಶಾಸಕರ ತಂಡ ಸದನದಲ್ಲಿ ಕೋಲಾಹಲವನ್ನೇ ಸೃಷ್ಟಿಸಿತ್ತು. ರಾಜ್ಯ ಅವೇಶನದಲ್ಲಿ ನಡೆಯಬಾರದಂತಹ ದುರುದೃಷ್ಟಕರ ಘಟನೆ ಅದಾಗಿತ್ತು. ಯಾವುದೇ ಕಾರಣಕ್ಕೂ ಚುನಾವಣೆ ನಡೆಸಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಶಾಸಕರು ಹಠಕ್ಕೆ ಬಿದ್ದಿದ್ದರು. ಪ್ರಸ್ತುತ ಮಂತ್ರಿಗಳಾಗಿರುವ ಜಮೀರ್ ಅಹ್ಮದ್ ಖಾನ್ ಅವರಂತೂ ನೇರವಾಗಿ ಸಭಾಧ್ಯಕ್ಷರ ಪೀಠದ ಮುಂದೆ ಬಂದು ಪೈಪರ್ ವೈಟ್ ಕಲ್ಲನ್ನು ಹಿಡಿದು ನನ್ನ ತೆಲೆಗೆ ಗುರಿ ಇಟ್ಟಿದ್ದರು. ಮೈಕ್ ಕಿತ್ತು ರೋಷಾವೇಷದಿಂದ ಹಲ್ಲೆಗೆ ಮುಂದಾಗಿದ್ದರು.

ಮಾರ್ಷಲ್ ಮಧ್ಯಪ್ರವೇಶಿಸಿದ್ದರಿಂದ ಅನಾಹುತ ತಪ್ಪಿತ್ತು. ಅಲ್ಲದೆ ಪ್ರತಿಭಟನಾಕಾರರು 12 ಫೈಲ್‌ಗಳನ್ನು ಸಭಾಧ್ಯಕ್ಷರತ್ತ ತೂರಿದ್ದರು. ಓರ್ವ ಶಾಸಕರಂತೂ ಆವೇಶದಿಂದ ಚುನಾವಣೆ ನಡೆಸುವ ಫೈಲ್‌ನ್ನೇ ಹರಿದು ಹಾಕಿದ್ದರು. ಈ ಎಲ್ಲಾ ಘಟನೆಗಳು ನಡೆದಾಗ ನಾನು ಸೂಕ್ತ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಆ ರೀತಿ ಮಾಡಿರಲಿಲ್ಲ. ತಾಳ್ಮೆಯಿಂದಲೇ ಯಶಸ್ವಿಯಾಗಿ ಚುನಾವಣಾ ಪ್ರಕ್ರಿಯೆ ಮುಗಿಸಿದ್ದೆ. ಕೆ.ಜಿ.ಬೋಪಯ್ಯ ಅವರು ಸ್ಪೀಕರ್ ಆಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್ ರಾಜ್ಯಪಾಲರಿಗೆ ದೂರು ಕೊಂಡೊಯ್ದರೂ ಕೂಡ ಚುನಾವಣಾ ಪ್ರಕ್ರಿಯೆ ಸರಿಯಾಗಿ ನಡೆದಿದೆ ಎಂದು ರಾಜ್ಯಪಾಲರು ಸಮರ್ಥಿಸಿದ್ದರು.

ಕಾಂಗ್ರೆಸ್ ಅಂದು ನಡೆದುಕೊಂಡ ರೀತಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಂದು ಜಮೀರ್ ಅವರನ್ನು ಸದನದಿಂದ ಹೊರಗೆ ಕಳುಹಿಸಿದ್ದು ಬಿಟ್ಟರೆ ಪ್ರತಿಭಟನಾ ನಿರತ ಶಾಸಕರ ವಿರುದ್ಧ ಕ್ರಮ ತೆಗೆದುಕೊಂಡಿರಲಿಲ್ಲ. ಯು.ಟಿ.ಖಾದರ್ ಇದನ್ನು ನೆನಪು ಮಾಡಿಕೊಳ್ಳಬೇಕು. ಯಾವ ರೀತಿ ಕಲಾಪ ನಡೆಸಬೇಕು ಎಂಬುದನ್ನು ಅರಿಯಬೇಕು ಎಂದರು. ದ್ವೇಷ ರಾಜಕಾರಣ ಸದನದ ಒಳಗೆ ಬರಬಾರದು ಎಂದು ಯೋಗಿಶ್ ಭಟ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!