ಹೊಸ ದಿಗಂತ ವರದಿ, ಮಂಗಳೂರು:
ಉಡುಪಿಯಲ್ಲಿ ಶನಿವಾರ ಪತ್ತೆಯಾದ ಫರಂಗಿಪೇಟೆಯ ವಿದ್ಯಾರ್ಥಿ ದಿಗಂತ್‌ನನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ಬೋಂದೆಲ್‌ನ ಬಾಲಕರ ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಹೇಬಿಯಸ್ ಕಾರ್ಪಸ್ ಅರ್ಜಿ ಹಿನ್ನೆಲೆಯಲ್ಲಿ ಬುಧವಾರ ಆತನನ್ನು ಹೈಕೋರ್ಟ್‌ಗೆ ಹಾಜರುಪಡಿಸಲಾಗುವುದು. ನ್ಯಾಯಾಲಯದ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪರೀಕ್ಷಾ ಭಯದಿಂದಲೇ ದಿಗಂತ್ ನಾಪತ್ತೆಯಾಗಿದ್ದ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಯತೀಶ್ ಎನ್. ತಿಳಿಸಿದರು.
ದಿಗಂತ್‌ನನ್ನು ಯಾರೂ ಅಪಹರಣ ಮಾಡಿಲ್ಲ. ಆತನೇ ಫರಂಗಿಪೇಟೆಯಯಿಂದ ತೆರಳಿ ಶಿವಮೊಗ್ಗ, ಮೈಸೂರು, ಬೆಂಗಳೂರು, ಉಡುಪಿ ಮುಂತಾದೆಡೆ 9 ದಿನಗಳ ಕಾಲ ಸುತ್ತಾಡಿದ್ದನು. ಮಾ.3ರಿಂದ ಆತನಿಗೆ ಪರೀಕ್ಷೆಯಿತ್ತು. ಪರೀಕ್ಷೆಗೆ ತಯಾರಿ ನಡೆಸದ ಆತ ನಾಪತ್ತೆಯಾಗಿದ್ದ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಫೆ. 25ರಂದು ಫರಂಗಿಪೇಟೆಯ ಮನೆಯಿಂದ ಭಜನೆಗೆಂದು ತೆರಳಿ ನಾಪತ್ತೆಯಾಗಿದ್ದ ದಿಗಂತ್ ರೈಲ್ವೆ ಟ್ರ್ಯಾಕ್ ಮೂಲಕ ಬಂದು ಅರ್ಕುಳದಲ್ಲಿ ಬೈಕ್‌ವೊಂದಕ್ಕೆ ಕೈ ಅಡ್ಡ ಹಿಡಿದು ಮಂಗಳೂರಿಗೆ ಆಗಮಿಸಿದ್ದಾನೆ. ಮಂಗಳೂರಿನಿಂದ ಖಾಸಗಿ ಬಸ್‌ನಲ್ಲಿ ಶಿವಮೊಗ್ಗಕ್ಕೆ ತೆರಳಿ ಅಲ್ಲಿಂದ ಮೈಸೂರು, ಕೆಂಗೇರಿಗೆ ಹೋಗಿ ನಂದಿಹಿಲ್ಸ್‌ನಲ್ಲಿ ಖಾಸಗಿ ರೆಸಾರ್ಟ್‌ನಲ್ಲಿ ಮೂರು ದಿನ ಕೆಲಸ ಮಾಡಿ ಹಣ ಪಡೆದು ಮತ್ತೆ ಮೈಸೂರಿಗೆ ಆಗಮಿಸಿ ಮುರ್ಡೇಶ್ವರ ಎಕ್ಸ್‌ಪ್ರೆಸ್ ರೈಲು ಮೂಲಕ ಉಡುಪಿಗೆ ಆಗಮಿಸಿದ್ದ. ಉಡುಪಿಯಲ್ಲಿ ಬಟ್ಟೆ ಖರೀದಿಸಲು ಡಿಮಾರ್ಟ್‌ಗೆ ತೆರಳಿದ್ದ. ಅಲ್ಲಿ ನೀಡಲು ಹಣವಿಲ್ಲದೆ ಎಸ್ಕೇಪ್ ಆಗಲು ಯತ್ನಿಸುತ್ತಿದ್ದಾಗ ಡಿಮಾರ್ಟ್ ಸಿಬ್ಬಂದಿ ಆತನನ್ನು ಗುರುತು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಉಡುಪಿ ಪೊಲೀಸರು ಆತನನ್ನು ರಕ್ಷಿಸಿ, ದಕ್ಷಿಣ ಕನ್ನಡ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ತನ್ನನ್ನು ಅಪಹರಣ ಮಾಡಲಾಗಿತ್ತು ಎಂದು ಮೊದಲು ತಿಳಿಸಿದ್ದ ದಿಗಂತ್, ಬಳಿಕ ವಿಚಾರಣೆ ವೇಳೆ ನಾನೇ ತೆರಳಿದ್ದೆ, ನನ್ನನ್ನು ಯಾರೂ ಅಪಹರಣ ಮಾಡಿಲ್ಲವೆಂದು ಹೇಳಿದ್ದಾನೆ ಎಂದು ವಿವರಿಸಿದರು.
ದಿಗಂತ್ ಬಳಿ 500 ರೂ. ಹಣವಿತ್ತು
ಮನೆಯಿಂದ ಹೊರಟಾಗ ದಿಗಂತ್ ಬಳಿ 500 ರೂ. ಹಣವಿತ್ತು. ಆ ಹಣ ಖರ್ಚಾದ ಬಳಿಕ ರೆಸಾರ್ಟ್‌ನಲ್ಲಿ ಕೆಲಸಕ್ಕೆ ಸೇರಿ ಅಲ್ಲಿಂದ ಹಣ ಪಡೆದುಕೊಂಡಿದ್ದಾನೆ. ಉಡುಪಿಗೆ ತಲುಪುವಾಗ ಆತನಲ್ಲಿದ್ದ ಹಣ ಖಾಲಿಯಾಗಿತ್ತು. ನಾಪತ್ತೆ ಸಂದರ್ಭ ದಿಗಂತ್‌ನ ಕಾಲಿನಲ್ಲಿ ಯಾವುದೋ ರಕ್ತಗಾಯವಿತ್ತು. ಅದೇ ರಕ್ತವನ್ನು ಚಪ್ಪಲಿಗೆ ಒರೆಸಿ, ರೈಲ್ವೆ ಟ್ರ್ಯಾಕ್ ಬಳಿ ಚಪ್ಪಲಿ, ಮೊಬೈಲ್ ಇರಿಸಿ ತೆರಳಿದ್ದ. ನಾಪತ್ತೆಯಾದ ಬಳಿಕ ಆತ ಮೊಬೈಲ್ ಬಳಸಿರಲಿಲ್ಲ. ಆತ ಯಾರನ್ನಾದರೂ ಸಂಪರ್ಕ ಮಾಡಬಹುದು ಎಂಬ ನಿಟ್ಟಿನಲ್ಲಿ ನಾವು ಆತನ ಸ್ನೇಹಿತರು, ಸಹಪಾಠಿಗಳು, ಮನೆಯವರ ಬಗ್ಗೆ ನಿಗಾ ಇರಿಸಿದ್ದೆವು. ಮನೆಯಲ್ಲಿ ಆತನಿಗೆ ಯಾವುದೇ ಒತ್ತಡ ಇರಲಿಲ್ಲ ಎಂದು ಎಸ್ಪಿ ಯತೀಶ್ ತಿಳಿಸಿದರು.
ಪೊಲೀಸ್ ವೈಫಲ್ಯ ಆಗಿಲ್ಲ
ದಿಗಂತ್ ನಾಪತ್ತೆ ಪ್ರಕರಣದ ತನಿಖೆಯಲ್ಲಿ ಪೊಲೀಸ್ ವೈಫಲ್ಯ ಆಗಿಲ್ಲ. ಆತನ ನಾಪತ್ತೆ ಪ್ರಕರಣ ದಾಖಲಾದ ಕೂಡಲೇ ತನಿಖೆ ಕೈಗೆತ್ತಿಕೊಳ್ಳಲಾಗಿತ್ತು. ಅದಕ್ಕಾಗಿ ಬಂಟ್ವಾಳ ಡಿವೈಎಸ್‌ಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಒಟ್ಟು 7 ತಂಡ ರಚಿಸಿ ತನಿಖೆ ನಡೆಸಲಾಗಿತ್ತು. ಆತನ ಮನೆ ಪರಿಸರ, ಫರಂಗಿಪೇಟೆಯ ರೈಲ್ವೆ ಟ್ರ್ಯಾಕ್ ಬಳಿ ಕೂಂಬಿಂಗ್ ಕೂಡಾ ನಡೆಸಲಾಗಿತ್ತು. ಶನಿವಾರ ಫರಂಗಿಪೇಟೆಯಲ್ಲಿ ದಿಗಂತ್ ಪ್ರಯಾಣಿಸುತ್ತಿದ್ದ ರೈಲು ಹಾದುಹೋದಾಗ ಪೊಲೀಸರು ಹುಡುಕಾಟ ನಡೆಸುತ್ತಿದ್ದುದನ್ನು ದಿಗಂತ್ ನೋಡಿದ್ದಾನೆ ಎಂದು ಆತ ತಿಳಿಸಿದ್ದಾನೆ ಎಂದು ಎಸ್ಪಿ ಹೇಳಿದರು.