ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುಟ್ಟಾ ಇಲ್ನೋಡು ಮೀನಿದೆ ಎಂದು ಮಗಳನ್ನು ಕರೆದು ಕಾಲುವೆಗೆ ತಳ್ಳಿ ತಂದೆಯೊಬ್ಬ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ಗುಜರಾತ್ನಲ್ಲಿ ನಡೆದಿದೆ.
ಮೊದಲು ಇದು ಆಕಸ್ಮಿಕ ಸಾವೆಂದು ಎಲ್ಲರೂ ಭಾವಿಸಿದ್ದರು. ಆದರೆ ಬಾಲಕಿಯ ತಾಯಿ ಅಂಜನಾ ಸೋಲಂಕಿ ಬೇರೆಯದನ್ನೇ ಹೇಳಿದ್ದಾರೆ, ತನ್ನ ಗಂಡನೇ ತನ್ನ 7 ವರ್ಷದ ಮಗುವನ್ನು ಕೊಲೆ ಮಾಡಿರುವುದಾಗಿ ಆರೋಪಿಸಿದ್ದಾರೆ.
ಬಾಲಕಿ ಜಾರಿ ಬಿದ್ದಿಲ್ಲ, ಬದಲಿಗೆ ಪತಿಯೇ ನರ್ಮದಾ ಕಾಲುವೆಗೆ ತಳ್ಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜೂನ್ 10ರಂದು ಖೇಡಾ ನಿವಾಸಿಗಳಾದ ವಿಜಯ್ ಸೋಲಂಕಿ ಮತ್ತು ಅಂಜನಾ ತಮ್ಮ ಹಿರಿಯ ಮಗಳು ಭೂಮಿಕಾ ಜತೆ ಅಲ್ಲೇ ಹತ್ತಿರದ ದೇವಸ್ಥಾನಕ್ಕೆ ಭೇಟಿ ನೀಡಲು ಹೊರಟಿದ್ದರು.
ಮೂವರು ತಮ್ಮ ದ್ವಿಚಕ್ರ ವಾಹನದಲ್ಲಿ ತಮ್ಮ ಮನೆಗೆ ಹಿಂದಿರುಗುತ್ತಿದ್ದಾಗ ಅಂಜನಾ ತನ್ನ ಹೆತ್ತವರನ್ನು ಭೇಟಿಯಾಗಬೇಕೆಂದಿದ್ದರು. ಅದಕ್ಕೆ ವಿಜಯ್ ಜಗಳ ಆರಂಭಿಸಿದ್ದ. ನನಗೆ ಗಂಡು ಮಗು ಬೇಕಿತ್ತು, ಆದರೆ ನೀನು ಹೆಣ್ಣು ಮಗುವನ್ನು ಹೆತ್ತಿದ್ದೀಯಾ ಎಂದು ಕೂಗಾಡಲು ಶುರು ಮಾಡಿದ್ದ ಎಂದು ಅಂಜನಾ ತಿಳಿಸಿದ್ದಾರೆ.
ಕೆಲವು ನಿಮಿಷಗಳ ನಂತರ ಅಂದರೆ ರಾತ್ರಿ 8 ಗಂಟೆ ಸುಮಾರಿಗೆ ಆ ವ್ಯಕ್ತಿ ಕಪದ್ವಾಂಜ್ನ ವಾಘಾವತ್ ಸೇತುವೆಯ ಮೇಲೆ ಬೈಕ್ ನಿಲ್ಲಿಸಿ ಭೂಮಿಕಾಳನ್ನು ವೇಗವಾಗಿ ಹರಿಯುವ ನರ್ಮದಾ ಕಾಲುವೆಗೆ ತಳ್ಳಿದ್ದಾನೆ. ಈ ಘಟನೆಯನ್ನು ಯಾರ ಬಳಿಯಾದರೂ ಹೇಳಿದರೆ ವಿಚ್ಛೇದನ ಕೊಡುವುದಾಗಿ ಎಚ್ಚರಿಕೆ ನೀಡಿದ್ದ. ಅಂಜನಾ ಹೇಗೋ ಆ ದುಃಖವನ್ನು ಸಹಿಸಿಕೊಂಡಿದ್ದರು ಎನ್ನಲಾಗಿದೆ.