ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಹ್ಯಾಕಾಶ ವಾಸದ ಬಳಿಕ ಭೂಮಿಗೆ ಮರಳಿರುವ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಂಡಿಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಹೇಳಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ ಇಸ್ರೋ, ಶುಕ್ಲಾ ಸೇರಿ ನಾಲ್ವರು ಗಗನಯಾತ್ರಿಗಳು ಭೂಮಿಗೆ ಆಗಮಿಸಿದ ಬಳಿಕ ಅವರಿಗೆ ಪ್ರಾಥಮಿಕ ಆರೋಗ್ಯ ಪರೀಕ್ಷೆ ನಡೆಸಲಾಯಿತು. ಮೈಕ್ರೋಗ್ರಾವಿಟಿಯ ಅಡ್ಡ ಪರಿಣಾಮಗಳ ಬಗ್ಗೆ ಹೃದಯರಕ್ತನಾಳ ಪರೀಕ್ಷೆ, ಸ್ನಾಯು ಮತ್ತು ಮೂಳೆ ಪರೀಕ್ಷೆ ಮತ್ತು ಮನೋಪರೀಕ್ಷೆಗಳನ್ನು ನಡೆಸಲಾಯಿತು. ಈ ವೇಳೆ ಯಾವುದೇ ತೊಂದರೆಗಳು ಕಾಣಿಸಿಕೊಳ್ಳಲಿಲ್ಲ. ಎಲ್ಲಾ ಗಗನಯಾತ್ರಿಗಳನ್ನು 1 ವಾರದ ಪುನಶ್ಚೇತನಕ್ಕೆ ಕಳುಹಿಸಲಾಗಿದೆ ಎಂದು ಹೇಳಿದೆ.
ಭೂಮಿಗೆ 18 ದಿನ ಕಳೆದ ನಂತರ ಬಂದಿರುವ ಶುಭಾಂಶು ಶುಕ್ಲಾ ಹಾಗೂ ಇತರ ಗಗನಯಾನಿಗಳು ಕೆಲವು ದಿನ ಸವಾಲಿನ ಸ್ಥಿತಿ ಎದುರಿಸಲಿದ್ದಾರೆ. ನಿರ್ವಾತ ಪ್ರದೇಶ ವಾಸದಿಂದ ಗುರುತ್ವಾಕರ್ಷಣೆಯಿರುವ ಮಾತೃಗ್ರಹಕ್ಕೆ ಬಂದಿರುವ ಶುಭಾಂಶು, ಇಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳುವಲ್ಲಿ ಕೆಲವು ಸವಾಲು ಎದುರಿಸಬೇಕಾಗುತ್ತದೆ. ಹೀಗಾಗಿ ಎಲ್ಲಾ ಯಾತ್ರಿಕರಿಗೆ 1 ವಾರ ಪುನಶ್ಚೇತನ ಶಿಬಿರ ಹಮ್ಮಿಕೊಳ್ಳಲಾಗಿದ್ದು, ನಂತರ ಅವರು ಶಿಬಿರದಿಂದ ಹೊರಬಂದು ಸಾರ್ವಜನಿಕರ ಜತೆ ಬೆರೆಯಲಿದ್ದಾರೆ.