ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೀದರ್‌ನಲ್ಲಿ ಅಸಾಧ್ಯ ಎನ್ನುವಂಥ ಘಟನೆಯೊಂದು ನಡೆದಿದ್ದು, ಜನರಲ್ಲಿ ನಡುಕ ಹುಟ್ಟಿಸಿದೆ. ಮೃತಪಟ್ಟ ಮಗುವಿನ ಅಂತ್ಯಸಂಸ್ಕಾರ ಮಾಡಲಾಗಿದ್ದು, ಮರುದಿನ ಬೆಳಗಾಗುವಷ್ಟರಲ್ಲಿ ಮಗುವಿನ ದೇಹ ಮರದಲ್ಲಿ ಪ್ರತ್ಯಕ್ಷವಾಗಿದೆ.
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದ ನಿವಾಸಿ ಅಂಬಯ್ಯಸ್ವಾಮಿ ಅವರ ಒಂದೂವರೆ ವರ್ಷದ ಹೆಣ್ಣು ಮಗು ಅನಾರೋಗ್ಯದಿಂದ ಶನಿವಾರ ಮೃತಪಟ್ಟಿತ್ತು. ತಡರಾತ್ರಿ ಮನೆಯವರು ಹಾಗೂ ಸಂಬಂಧಿಕರು ಸೇರಿ ಜಮೀನಿನಲ್ಲಿ ಮಗುವಿನ ಅಂತ್ಯಸಂಸ್ಕಾರ ನೆರವೇರಿಸಿ ಮನೆಗೆ ಬಂದಿದ್ದರು.
ಭಾನುವಾರ ಬೆಳ್ಳಂಬೆಳಗ್ಗೆ ಮಗು ಮರಕ್ಕೆ ಕಟ್ಟಿದ್ದ ಜೋಕಾಲಿಯಲ್ಲಿ ಪ್ರತ್ಯಕ್ಷವಾಗಿದ್ದು ಕುಟುಂಬಸ್ಥರು ದಿಗ್ಭ್ರಮೆಗೊಂಡಿದ್ದಾರೆ. ಮಗುವಿನ ಮೃತದೇಹವನ್ನು ಕಪ್ಪು ಬಟ್ಟೆಯಲ್ಲಿ ಮರಕ್ಕೆ ಕಟ್ಟಿ ಜೋಳಿಗೆಯಲ್ಲಿ ನೇತು ಹಾಕಲಾಗಿತ್ತು. ಮಾಟ ಮಂತ್ರ ಮಾಡುವವರು ಹೀಗೆ ಮಾಡಿರಬಹುದೆಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಮಗುವಿನ ಶವವನ್ನು ತೆಗೆದುಕೊಂಡು ಹೋಗಿ ಮತ್ತೆ ಅದೇ ಸ್ಥಳದಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.