January20, 2026
Tuesday, January 20, 2026
spot_img

ವಿದೇಶಿಗರು ಅಮೆರಿಕದಲ್ಲಿ ಎಷ್ಟು ದಿನಗಳು ಉಳಿಯಬಹುದು? ಸ್ಪಷ್ಟನೆ ನೀಡಿದ ರಾಯಭಾರ ಕಚೇರಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸಿಗರ ಮೇಲಿನ ಒಂದರ ಮೇಲೊಂದು ಕಠಿಣ ಕ್ರಮಕ್ಕೆ ಮುಂದಾಗಿದ್ದು, ಈ ನಡುವೆ ಭಾರತದಲ್ಲಿನ ಅಮೆರಿಕದ ರಾಯಭಾರ ಕಚೇರಿಯು ವಿದೇಶಿಗರು ಅಮೆರಿಕದಲ್ಲಿ ಎಷ್ಟು ದಿನಗಳು ಉಳಿಯಬಹುದು? ಎಂಬುದಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಬಹಿರಂಗಗೊಳಿಸಿದೆ.

ಈ ಬಗ್ಗೆ ಎಕ್ಸ್​ ಪೋಸ್ಟ್‌ನಲ್ಲಿ ರಾಯಭಾರ ಕಚೇರಿಯು, ಅಮೆರಿಕದಲ್ಲಿ ವಿಸಿಟರ್​​ಗಳ ವಾಸ್ತವ್ಯದ ಅವಧಿಯು ಅವರ ವೀಸಾ ಮುಕ್ತಾಯ ದಿನಾಂಕದ ಪ್ರಕಾರವಾಗಿರುವುದಿಲ್ಲ ಎಂದು ಹೇಳಿದೆ.

ಅಂತಾರಾಷ್ಟ್ರೀಯ ವಿಸಿಟರ್​​ಗಳಿಗೆ ಅಮೆರಿಕದಲ್ಲಿ ಉಳಿಯಲು ಅನುಮತಿಸಲಾದ ಸಮಯವನ್ನು ಅವರ ಆಗಮನದ ನಂತರ ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ಅಧಿಕಾರಿ ನಿರ್ಧರಿಸುತ್ತಾರೆ. ವೀಸಾ ಮುಕ್ತಾಯದ ದಿನಾಂಕಕ್ಕೂ ಅವರು ಅಮೆರಿಕದಲ್ಲಿ ಉಳಿಯಲು ಇರುವ ಗಡುವಿಗೂ ಸಂಬಂಧವಿಲ್ಲ. ವೀಸಾ ಮುಕ್ತಾಯದ ದಿನಾಂಕಕ್ಕೂ ಮೊದಲೇ ಅವರು ಅಮೆರಿಕ ಬಿಟ್ಟು ಹೊರಡಬೇಕಾಗಬಹುದು. ನೀವು ಎಷ್ಟು ಕಾಲ ಉಳಿಯಬಹುದು ಎಂಬುದನ್ನು ನೋಡಲು, https://i94.cbp.dhs.gov ನಲ್ಲಿ ನಿಮ್ಮ I-94 ‘Admit Until Date’ ಅನ್ನು ಪರಿಶೀಲಿಸಿ” ಎಂದು ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

ಅಮೆರಿಕದ ಹೆಚ್ಚಿನ ವಿಸಿಟರ್​​ಗಳಿಗೆ ಕಡ್ಡಾಯವಾಗಿರುವ I-94 ಫಾರ್ಮ್ ‘admit Until date’ ಮಾಹಿತಿಯನ್ನು ಹೊಂದಿರುತ್ತದೆ. ಒಬ್ಬ ವ್ಯಕ್ತಿಯು ಅಮೆರಿಕದ ನೆಲದಲ್ಲಿ ಉಳಿಯಬಹುದಾದ ಕೊನೆಯ ದಿನಾಂಕವನ್ನು ಇದು ತೋರಿಸುತ್ತದೆ. ಪ್ರಯಾಣಿಕರು ಗಮನಿಸಬೇಕಾದ ಅಂಶವೆಂದರೆ ಆ ದಿನಾಂಕವು ಅವರ ವೀಸಾ ಮುಕ್ತಾಯ ದಿನಾಂಕದೊಂದಿಗೆ ಹೊಂದಿಕೆಯಾಗುವುದಿಲ್ಲ. ಅದನ್ನು ಅವರು ಅಮೆರಿಕದ ಗಡಿಯನ್ನು ತಲುಪಿದ ನಂತರ ಕಸ್ಟಮ್ಸ್ ಅಧಿಕಾರಿ ನಿರ್ಧರಿಸುತ್ತಾರೆ. ಸಾಮಾನ್ಯವಾಗಿ ವಿಮಾನ ನಿಲ್ದಾಣ ಅಥವಾ ಬಂದರು ಮೂಲಕ ಅಮೆರಿಕಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಕಸ್ಟಮ್ಸ್ ಮತ್ತು ಗಡಿ ಪೊಲೀಸ್ ಅಧಿಕಾರಿ ಎಲೆಕ್ಟ್ರಾನಿಕ್ I-94 ಫಾರ್ಮ್ ಅನ್ನು ಒದಗಿಸುತ್ತಾರೆ. ಈ ವ್ಯಕ್ತಿಗಳು ಇನ್ನು ಮುಂದೆ I-94 ಗೆ ಅರ್ಜಿ ಸಲ್ಲಿಸಲು ವೆಬ್‌ಸೈಟ್ ಅನ್ನು ಬಳಸಬೇಕಾಗಿಲ್ಲ. ಆದರೆ, ಭೂಮಿ ಅಥವಾ ಹಡಗಿನ ಮೂಲಕ ಅಮೆರಿಕವನ್ನು ಪ್ರವೇಶಿಸುವವರು ತಾತ್ಕಾಲಿಕ I-94 ಗೆ ಅರ್ಜಿ ಸಲ್ಲಿಸಲು ವೆಬ್‌ಸೈಟ್ ಅನ್ನು ಬಳಸಬೇಕಾಗುತ್ತದೆ. ಹೀಗಾಗಿ ಅದಾದ ನಂತರ ಪ್ರವೇಶದ ಹಂತದಲ್ಲಿ ಅವರು ಅಮೆರಿಕದಲ್ಲಿ ವಾಸವಾಗುವ ಗಡುವಿನ ಸಮಯವನ್ನು ನಿರ್ಧರಿಸಲಾಗುತ್ತದೆ ಎಂದು ಹೇಳಿದೆ.

Must Read