ಹೊಸದಿಗಂತ ಡಿಜಿಟಲ್ ಡೆಸ್ಕ್:
ಢಾಕಾ ಸಮೀಪದ ನರಸಿಂಗ್ಡಿ ಜಿಲ್ಲೆಯಲ್ಲಿ ಹಿಂದು ಸಮುದಾಯದ ಯುವಕನೊಬ್ಬನನ್ನು ಗ್ಯಾರೇಜ್ ಒಳಗೇ ಸುಟ್ಟುಹಾಕಿರುವ ಘಟನೆ ನಡೆದಿದೆ. 23 ವರ್ಷದ ಚಂಚಲ್ ಚಂದ್ರ ಭೌಮಿಕ್ ಈ ದಾರುಣ ಕೃತ್ಯಕ್ಕೆ ಬಲಿಯಾಗಿದ್ದು, ಇದು ಆಕಸ್ಮಿಕವಲ್ಲ, ಪೂರ್ವನಿಯೋಜಿತ ದಾಳಿ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮಸೀದಿ ಮಾರುಕಟ್ಟೆ ಪ್ರದೇಶದ ಬಳಿ ಇರುವ ಗ್ಯಾರೇಜ್‌ನಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ. ಕೆಲಸದ ನಿಮಿತ್ತ ನರಸಿಂಗ್ಡಿಯಲ್ಲಿ ವಾಸವಾಗಿದ್ದ ಚಂಚಲ್, ಗ್ಯಾರೇಜ್ ಒಳಗೇ ಮಲಗಿದ್ದ ವೇಳೆ ಕಿಡಿಗೇಡಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಗ್ಯಾರೇಜ್‌ನ ಶಟರ್‌ಗೆ ಹೊರಗಿನಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿದ್ದರಿಂದ ಯುವಕ ಅಂಗಡಿಯೊಳಗೇ ಸಜೀವ ದಹನವಾಗಿದ್ದಾನೆ.
ಸ್ಥಳೀಯರು ಮಾಹಿತಿ ನೀಡಿದ ಬಳಿಕ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಸುಮಾರು ಒಂದು ಗಂಟೆ ಶ್ರಮಪಟ್ಟು ಬೆಂಕಿಯನ್ನು ನಂದಿಸಿದೆ. ನಂತರ ಚಂಚಲ್‌ನ ಸುಟ್ಟ ದೇಹವನ್ನು ಹೊರತೆಗೆಯಲಾಗಿದೆ.
ಮೃತ ಯುವಕ ಕುಟುಂಬಕ್ಕೆ ಏಕೈಕ ಆಧಾರವಾಗಿದ್ದನು ಎಂದು ತಿಳಿದುಬಂದಿದೆ. ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹತ್ಯೆಯ ಹಿಂದಿನ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.



