ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಈವರೆಗೆ ನಡೆದ ಅಪಘಾತದಲ್ಲಿ 100 ಮಂದಿ ಮೃತಪಟ್ಟಿದ್ದು 335 ಮಂದಿ ಗಾಯಗೊಂಡಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾಹಿತಿ ನೀಡಿದ್ದಾರೆ.
ಮಂಗಳವಾರ ಸದನದಲ್ಲಿ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಡಾ ಜಿ ಪರಮೇಶ್ವರ್, ಬಹಳಷ್ಟು ನ್ಯೂನತೆಗಳೊಂದಿಗೆ ದಶಪಥ ನಿರ್ಮಾಣ ಮಾಡಲಾಗಿದೆ. ರಸ್ತೆ ತಿರುವುಗಳಿಗೆ, ವೇಗ ಮಿತಿ ಇಳಿಕೆಗೆ ಯಾವುದೇ ಸೂಚನಾ ಫಲಕಗಳಿಲ್ಲ. ವೇಗವಾಗಿ ವಾಹನ ಓಡಿಸಿ ಬಂದಾಗ ಅಪಘಾತಗಳಾಗುತ್ತಿವೆ ಎಂದರು.
ಮಾರ್ಚ್ನಲ್ಲಿ 62 ಅಪಘಾತವಾಗಿದ್ದು, 20 ಜನ ಮೃತಪಟ್ಟಿದ್ದಾರೆ. 63 ಜನ ಗಾಯಗೊಂಡಿದ್ದಾರೆ. ಏಪ್ರಿಲ್ನಲ್ಲಿ 23 ಜನ ಸಾವು, 83 ಗಾಯ.ಮೇ ತಿಂಗಳಲ್ಲಿ 29 ಸಾವು, 93 ಗಾಯ. ಜೂನ್ 28 ಸಾವು, 96 ಗಾಯ. ಮಾರ್ಚ್ನಿಂದ ಜೂನ್ವರೆಗೆ ಒಟ್ಟು 100 ಸಾವು ಸಂಭವಿಸಿದ್ದು 335 ಜನರಿಗೆ ಗಾಯಗಳಾಗಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿವರಿಸಿದರು.
ಪಾದಚಾರಿಗಳು ಹೆದ್ದಾರಿಗೆ ಬರದಂತೆ ತಂತಿ ಬೇಲಿ ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ಯಾಟ್ರೋಲಿಂಗ್ ವಾಹನಗಳ ಸಂಖ್ಯೆ ಹೆಚ್ಚಿಸಲು, ಯಾವುದೇ ವಾಹನಗಳು ಮಾರ್ಗ ಮಧ್ಯೆ ನಿಲ್ಲದಂತೆ ಕ್ರಮಕ್ಕೆ ಸೂಚಿಸಲಾಗಿದೆ. ಎಕ್ಸ್ಪ್ರೆಸ್ ವೈವೇ ವ್ಯಾಪ್ತಿಯಲ್ಲಿ ಸ್ಥಳಗಳ ಸೂಚನಾ ಫಲಕಗಳನ್ನು ಹಾಕಲಾಗುತ್ತದೆ. ಲೈನ್ ಪಾಲನೆಗೆ ಕ್ರಮ, ಓವರ್ ಟೇಕ್ ಹೇಗೆ ಅನ್ನೋ ಬಗ್ಗೆ ಸೂಚನೆ ಕೊಡಲಾಗುತ್ತದೆ.ಕೆಲವು ವಾಹನ ಚಾಲಕರಿಗೆ ಸಂಚಾರಿ ನಿಯಮಗಳು ಗೊತ್ತಿಲ್ಲ. ಲೈಸೆನ್ಸ್ ಸುಲಭವಾಗಿ ಸಿಗುತ್ತದೆ, ಹಾಗಾಗಿ ವಾಹನಗಳ ಸಂಖ್ಯೆಯೂ ಹೆಚ್ಚಿದೆ. ಹೆದ್ದಾರಿ ಪ್ರಾಧಿಕಾರಕ್ಕೆ ಶೀಘ್ರವೇ ರಾಜ್ಯ ಸರ್ಕಾರ ಪತ್ರ ಬರೆಯುತ್ತದೆ. ಅಪಘಾತ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.