ಕೂದಲು ಎಂದರೆ ಕೇವಲ ಶರೀರದ ಒಂದು ಭಾಗವಲ್ಲ. ಅದು ವ್ಯಕ್ತಿಯ ವ್ಯಕ್ತಿತ್ವ, ನೋಟ ಮತ್ತು ಆತ್ಮವಿಶ್ವಾಸದ ಪ್ರತೀಕವೂ ಆಗಿದೆ. ಆದರೆ ಇಂದಿನ ದಿನಗಳಲ್ಲಿ ಧೂಳು, ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯ ಪರಿಣಾಮದಿಂದ ಕೂದಲು ಬೇಗನೆ ಉದುರುವುದು, ಡ್ರೈ ಆಗುವುದು ಆಗುತ್ತಿದೆ. ಕೆಲವರು ಪ್ರತಿದಿನ ತಲೆ ಸ್ನಾನ ಮಾಡುವುದು ಆರೋಗ್ಯಕರ ಅಭ್ಯಾಸ ಎಂದು ನಂಬುತ್ತಾರೆ. ಆದರೆ ತಜ್ಞರ ಪ್ರಕಾರ ಇದು ತಪ್ಪು ಕಲ್ಪನೆ. ಏಕೆಂದರೆ ಪ್ರತಿದಿನ ತಲೆ ಸ್ನಾನ ಮಾಡುವುದು ಕೂದಲಿನ ನೈಸರ್ಗಿಕ ಎಣ್ಣೆಯನ್ನು ತೆಗೆದುಹಾಕಿ, ಕೂದಲನ್ನು ನಿರ್ಜೀವಗೊಳಿಸುವ ಅಪಾಯವಿದೆ. ಹಾಗಾದರೆ ವಾರಕ್ಕೆ ಎಷ್ಟು ಬಾರಿ ತಲೆ ಸ್ನಾನ ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳೋಣ.
ತಜ್ಞರ ಪ್ರಕಾರ ವಾರಕ್ಕೆ 2 ರಿಂದ 3 ಬಾರಿ ತಲೆ ಸ್ನಾನ ಮಾಡಿದರೆ ಸಾಕು. ಪ್ರತಿದಿನ ತಲೆ ಸ್ನಾನ ಮಾಡುವುದು ಕೂದಲಿನ ತೇವಾಂಶವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಆದರೆ, ನಿಮ್ಮ ಕೂದಲಿನ ಪ್ರಕಾರದ ಮೇಲೆ ಇದರ ಆವೃತ್ತಿ ಬದಲಾಗುತ್ತದೆ.
- ಎಣ್ಣೆಯುಕ್ತ ಕೂದಲು: ವಾರಕ್ಕೆ 3 ರಿಂದ 4 ಬಾರಿ ತಲೆ ಸ್ನಾನ ಮಾಡಬಹುದು, ಏಕೆಂದರೆ ಇಂತಹ ಕೂದಲು ಬೇಗನೆ ಜಿಡ್ಡಾಗುತ್ತದೆ.
- ಒಣ ಕೂದಲು: ವಾರಕ್ಕೆ 1 ಅಥವಾ 2 ಬಾರಿ ತಲೆ ಸ್ನಾನ ಮಾಡುವುದು ಸೂಕ್ತ. ಇದರಿಂದ ನೈಸರ್ಗಿಕ ತೇವಾಂಶ ಉಳಿಯುತ್ತದೆ.
ತಲೆ ಸ್ನಾನ ಮಾಡುವಾಗ ಗಮನಿಸಬೇಕಾದ ವಿಷಯಗಳು
- ಸೌಮ್ಯ ಶಾಂಪೂ ಬಳಸಿ: ರಾಸಾಯನಿಕಯುಕ್ತ ಶಾಂಪೂಗಳ ಬದಲು, ನೈಸರ್ಗಿಕ ಪದಾರ್ಥಗಳಿಂದ ಮಾಡಿದ ಅಥವಾ ಸಲ್ಫೇಟ್ ಮುಕ್ತ ಶಾಂಪೂ ಬಳಸಿ.
- ಕೂದಲಿನ ಪ್ರಕಾರ ತಿಳಿದು ಆಯ್ಕೆ ಮಾಡಿ: ಒಣ ಕೂದಲಿಗೆ ಮೈಸ್ಚರೈಸಿಂಗ್ ಶಾಂಪೂ, ಎಣ್ಣೆಯುಕ್ತ ಕೂದಲಿಗೆ ಕ್ಲೀನ್ಸಿಂಗ್ ಶಾಂಪೂ ಸೂಕ್ತ.
- ಕಂಡಿಷನರ್ ಬಳಸಿ: ತಲೆ ಸ್ನಾನದ ನಂತರ ಕೂದಲಿನ ತೇವಾಂಶ ಕಾಪಾಡಲು ಕಂಡಿಷನರ್ ಉಪಯೋಗಿಸಬೇಕು.
- ಅತಿಯಾಗಿ ತಲೆ ತೊಳೆಯಬೇಡಿ: ಪ್ರತಿದಿನ ಶಾಂಪೂ ಉಪಯೋಗಿಸುವುದರಿಂದ ಕೂದಲು ಉದುರುವ ಅಪಾಯ ಹೆಚ್ಚುತ್ತದೆ.
- ಪ್ರಕೃತಿಯ ಪರಿಹಾರಗಳು: ಮೆಂತ್ಯೆ, ಆಮ್ಲಾ ಅಥವಾ ಅಲೋವೆರಾ ಇರುವ ನೈಸರ್ಗಿಕ ಶಾಂಪೂಗಳು ಕೂದಲಿಗೆ ಆರೋಗ್ಯಕರ.

