ಬ್ಯಾಂಕ್‌ಗಳಿಗೆ ₹ 2,000 ಮುಖಬೆಲೆಯ ನೋಟು ಎಷ್ಟು ಪ್ರಮಾಣ ವಾಪಸ್ ಆಗಿದೆ?: ಆರ್‌ಬಿಐ ನೀಡಿದ್ರು ಮಾಹಿತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೇ 19ರಂದು ₹ 2,000 ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದ ಬಳಿಕ ಈವರೆಗೆ ಶೇ 76ರಷ್ಟು ನೋಟುಗಳು ಬ್ಯಾಂಕ್‌ಗಳಿಗೆ ವಾಪಸ್ ಆಗಿವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸೋಮವಾರ ತಿಳಿಸಿದೆ.

ಮೇ 19ರಂದು ಆರ್‌ಬಿಐ, ಈ ನೋಟುಗಳನ್ನು ಉಳಿತಾಯ ಖಾತೆಗಳಲ್ಲಿ ಠೇವಣಿ ಇಡುವ ಮೂಲಕ ಅಥವಾ ಬದಲಾಯಿಸಿಕೊಳ್ಳುವ ಮೂಲಕ ಬ್ಯಾಂಕ್‌ಗಳಿಗೆ ಹಿಂತಿರುಗಿಸಬೇಕು ಎಂದು ಸೂಚನೆ ನೀಡಿತ್ತು.

ಬ್ಯಾಂಕ್‌ಗಳಿಂದ ಕಲೆಹಾಕಿದ ಅಂಕಿ-ಅಂಶಗಳ ಪ್ರಕಾರ, ಮೇ 19ರಂದು ₹ 2 ಸಾವಿರ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಪ್ರಕಟಿಸಿದಾಗಿನಿಂದ ಜೂನ್ 30ರ ವರೆಗೆ ₹ 2.72 ಲಕ್ಷ ಕೋಟಿ ಮೌಲ್ಯದ ನೋಟುಗಳು ಬ್ಯಾಂಕ್‌ಗಳಿಗೆ ವಾಪಸ್‌ ಆಗಿವೆ. ಪರಿಣಾಮವಾಗಿ, ಜೂನ್ 30ರ ವಹಿವಾಟು ಅಂತ್ಯದ ವೇಳೆಗೆ ₹ 0.84 ಲಕ್ಷ ಕೋಟಿ ಮೌಲ್ಯದ ನೋಟುಗಳು ಚಲಾವಣೆಯಲ್ಲಿವೆ’ ಎಂದು ಆರ್‌ಬಿಐ ಹೇಳಿಕೆ ನೀಡಿದೆ.

ಈ ವರೆಗೆ ಒಟ್ಟು ಶೇ 76 ರಷ್ಟು ನೋಟುಗಳು ಬ್ಯಾಂಕ್‌ಗಳಿಗೆ ವಾಪಸ್ ಆಗಿವೆ. ಪ್ರಮುಖ ಬ್ಯಾಂಕ್‌ಗಳು ನೀಡಿರುವ ಮಾಹಿತಿ ಪ್ರಕಾರ, ಶೇ 87ರಷ್ಟು ನೋಟುಗಳು ಠೇವಣಿ ಮೂಲಕ ಹಾಗೂ ಉಳಿದ ಶೇ 13 ನೋಟುಗಳು ಇತರ ನೋಟುಗಳೊಂದಿಗೆ ಬದಲಾವಣೆ ಮೂಲಕ ವಾಪಸ್‌ ಆಗಿವೆ ಎಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!