ಇಂದಿನ ಕಾಲದಲ್ಲಿ ಶಾಲೆ ಎಂದರೆ ಕೇವಲ ಪಾಠ ನಡೆಯುವ ಜಾಗ ಮಾತ್ರವಲ್ಲ. ಮನೆ ಕೂಡ ಮಕ್ಕಳಿಗೆ ಎರಡನೇ ತರಗತಿಯಾಗಿಬಿಟ್ಟಿದೆ. ಶಾಲೆಯಿಂದ ಬಂದ ಕೂಡಲೇ ಪುಸ್ತಕ, ಹೋಮ್‌ವರ್ಕ್, ಪ್ರಾಜೆಕ್ಟ್ ಎಂಬ ಒತ್ತಡಕ್ಕೆ ಮಕ್ಕಳು ಸಿಲುಕುತ್ತಿದ್ದಾರೆ. ಓದು ಮುಖ್ಯವೇ ಸರಿ, ಆದರೆ ಅದು ಮಿತಿಮೀರಿದಾಗ ಮಕ್ಕಳ ಮನಸ್ಸಿನ ಮೇಲೆ ಭಾರವಾಗಿ ಪರಿಣಮಿಸುತ್ತದೆ. ಇದು ಪೋಷಕರಿಗೆ ಎಚ್ಚರಿಕೆಯ ಸಂಕೇತ.
ಮಕ್ಕಳಲ್ಲಿ ಒತ್ತಡವಿದೆ ಎಂದು ಹೇಗೆ ಗುರುತಿಸಬಹುದು?
ಒತ್ತಡದಲ್ಲಿರುವ ಮಕ್ಕಳು ಶಾಲೆ ಬಗ್ಗೆ ಹೆಚ್ಚಾಗಿ ದೂರು ಹೇಳುವುದು, ಶಾಲೆ ತಪ್ಪಿಸಲು ನೆಪ ಹುಡುಕುವುದು, ಅತಿಯಾದ ಕೋಪ ತೋರಿಸುವುದು ಅಥವಾ ನಡತೆಯಲ್ಲಿ ಅಸಹಜ ಬದಲಾವಣೆ ಕಾಣಿಸಿಕೊಳ್ಳುತ್ತದೆ. ಕೆಲವರು ಓದಿನಲ್ಲಿ ಹಿಂದುಳಿಯುತ್ತಾರೆ, ಸ್ನೇಹಿತರೊಂದಿಗೆ ಬೆರೆಯುವುದನ್ನು ತಪ್ಪಿಸುತ್ತಾರೆ, ಪೋಷಕರೊಂದಿಗೆ ಕಿರಿಕಿರಿ ತೋರಿಸುತ್ತಾರೆ. ಇವು ಆರಂಭಿಕ ಲಕ್ಷಣಗಳು.
ಪೋಷಕರು ಏನು ಮಾಡಬೇಕು?
ಮಕ್ಕಳ ದಿನಚರಿಯನ್ನು ಗಮನಿಸುವುದು ಮೊದಲ ಹೆಜ್ಜೆ. ಶಾಲೆ ಮತ್ತು ಮನೆಯ ಓದು ಸಮಯಕ್ಕೆ ಸ್ಪಷ್ಟ ವೇಳಾಪಟ್ಟಿ ರೂಪಿಸಬೇಕು. ಓದಿನ ಜೊತೆಗೆ ಆಟ, ವಿಶ್ರಾಂತಿ ಮತ್ತು ಹವ್ಯಾಸಗಳಿಗೆ ಸಮಯ ನೀಡಬೇಕು. ಮಕ್ಕಳನ್ನು ಹೊರಾಂಗಣ ಕ್ರೀಡೆಗಳಿಗೆ ಉತ್ತೇಜಿಸಬೇಕು. ಓದು ಭವಿಷ್ಯಕ್ಕೆ ಏಕೆ ಮುಖ್ಯ ಎಂಬುದನ್ನು ಭಯವಿಲ್ಲದೆ, ಶಾಂತವಾಗಿ ವಿವರಿಸಬೇಕು. ಮಕ್ಕಳಲ್ಲಿ ಅತಿಯಾದ ಒತ್ತಡ ಅಥವಾ ಮನೋಸ್ಥಿತಿ ಬದಲಾವಣೆ ಕಂಡರೆ, ಮನೋವೈಜ್ಞಾನಿಕ ಸಲಹೆ ಅಥವಾ ಸಮಾಲೋಚನೆ ಪಡೆಯುವುದರಲ್ಲಿ ಹಿಂಜರಿಯಬಾರದು.
ಒಟ್ಟಿನಲ್ಲಿ, ಓದು ಮಕ್ಕಳ ಬೆಳವಣಿಗೆಗೆ ಅಗತ್ಯ. ಆದರೆ ಸಂತೋಷ ಮತ್ತು ಮಾನಸಿಕ ನೆಮ್ಮದಿ ಇದ್ದಾಗ ಮಾತ್ರ ಅದು ಫಲಕಾರಿಯಾಗುತ್ತದೆ.

