ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೈಬರ್ ಕ್ರೈಂ ವಂಚನೆ ಪ್ರಕರಣ ಜಾಸ್ತಿ ಆಗುತ್ತಿದ್ದಂತೆ ಅವುಗಳನ್ನು ತಡೆಗಟ್ಟಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಹಣಕಾಸು ಸಂಸ್ಥೆಗಳಿಗೆ ಒಂದೇ ಸರಣಿಯ ನಂಬರ್‌ಗಳಿಂದ ಕರೆಯನ್ನು ಕಳುಹಿಸಬೇಕೆಂದು ಕಡ್ಡಾಯ ಮಾಡಿ ಆದೇಶ ಪ್ರಕಟಿಸಿದೆ.
ಬ್ಯಾಂಕುಗಳು, ಮ್ಯೂಚುವಲ್ ಫಂಡ್‌ಗಳು ಮತ್ತು ಪಿಂಚಣಿ ನಿಧಿ ಕಂಪನಿಗಳು 1600 ಸರಣಿ ಸಂಖ್ಯೆಯಿಂದಲೇ ಕರೆ ಕಳುಹಿಸಬೇಕೆಂದು ಟ್ರಾಯ್ ಸೂಚಿಸಿದೆ.ಕಂಪನಿಗಳೇ ಕಳುಹಿಸಿದ ಕರೆ ಯಾವುದು? ಮತ್ತು ಮೋಸ ಮಾಡುವ ಸ್ಪ್ಯಾಮ್ ಕರೆ ಯಾವುದು ಎಂದು ಪತ್ತೆಹಚ್ಚಲು ಟ್ರಾಯ್ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು ಮಾರ್ಚ್ 2026 ರೊಳಗೆ ಹಂತ ಹಂತವಾಗಿ ಜಾರಿಯಾಗಲಿದೆ.
ದೂರಸಂಪರ್ಕ ಇಲಾಖೆ ʼ1600ʼ ಸಂಖ್ಯಾ ಬ್ಲಾಕ್ ಅನ್ನು ನಿರ್ದಿಷ್ಟವಾಗಿ ನಿಯಂತ್ರಿತ ಹಣಕಾಸು ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಹಂಚಿಕೆ ಮಾಡಿದ ನಂತರ ಈ ನಿರ್ದೇಶನ ಬಂದಿದೆ. ಪ್ರಸ್ತುತ ಈಗ ಸುಮಾರು 485 ಹಣಕಾಸು ಸಂಸ್ಥೆಗಳು ಈಗಾಗಲೇ 1600 ಸರಣಿಯನ್ನು ಬಳಸುತ್ತಿದ್ದು 2,800 ಕ್ಕೂ ಹೆಚ್ಚು ಸಂಖ್ಯೆಗಳನ್ನು ಒಳಗೊಂಡಿವೆ.
ಇಲ್ಲಿಯವರೆಗಿನ ವ್ಯವಸ್ಥೆಯಲ್ಲಿ ಬ್ಯಾಂಕ್‌ನಿಂದ ಬರುತ್ತಿರುವ ಕರೆ ಯಾವುದು ಬೇರೆಯವರು ಕಳುಹಿಸಿದ ಕರೆ ಯಾವುದು ಎಂದು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ. ವ್ಯವಸ್ಥೆಯಲ್ಲಿರುವ ಈ ಲೋಪದ ಲಾಭ ಪಡೆಯುತ್ತಿರುವ ಕಳ್ಳರು ಈಗ ಬೇರೆ ಬೇರೆ ನಂಬರ್‌ಗಳಿಂದ ಕರೆ ಮಾಡಿ ನಾವು ಬ್ಯಾಂಕ್ ಸಿಬ್ಬಂದಿ ಎಂದು ನಂಬಿಸಿ ಗ್ರಾಹಕರ ವೈಯಕ್ತಿಕ ವಿವರ ಪಡೆದು ಹಣವನ್ನು ದೋಚುತ್ತಿದ್ದಾರೆ.
ಸೈಬರ್ ಕಳ್ಳರು ಈ ತಂತ್ರವನ್ನೇ ಬಳಸಿ ಹೆಚ್ಚು ಹೆಚ್ಚು ಕೃತ್ಯ ಎಸಗುತ್ತಿದ್ದಾರೆ ಎನ್ನುವ ವಿಚಾರ ಟ್ರಾಯ್ ಗಮನಕ್ಕೆ ಬರುತ್ತಿದ್ದಂತೆ ಈಗ 1600-ಸರಣಿಯ ನಂಬರ್‌ನಿಂದಲೇ ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ಕರೆ ಕಳುಹಿಸಬೇಕೆಂದು ಸೂಚಿಸಿದೆ. ಇದರಿಂದ ನಾಗರಿಕರಿಗೆ ವಿಶ್ವಾಸಾರ್ಹ ಹಣಕಾಸು ಕರೆಗಳನ್ನು ಗುರುತಿಸಲು ಸಹಾಯವಾಗಲಿದೆ ಎಂದು TRAI ಹೇಳಿದೆ.
ಇನ್ಮುಂದೆ 1600 ಸರಣಿ ಸಂಖ್ಯೆಯಿಂದಲೇ ಬರಲಿದೆ ಹಣಕಾಸು ಸಂಸ್ಥೆಗಳ ಕಾಲ್

