ಹೊಸ ದಿಗಂತ ವರದಿ, ದಾವಣಗೆರೆ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನಾನಾಗಲೀ, ನನ್ನ ಕುಟುಂಬದವರಾಗಲೀ ಸ್ಪರ್ಧಿಸುವುದಿಲ್ಲ. ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದೇವೆ. ಯಾರೇ ಅಭ್ಯರ್ಥಿಯಾದರೂ ತನು, ಮನ, ಧನದಿಂದ ಬೆಂಬಲಿಸಿ, ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದು ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಜಿ.ಎಂ.ಸಿದ್ದೇಶ್ವರ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಚುನಾವಣೆಯಲ್ಲಿ ನಾವೇ ನಿಂತರೆ ಕಾರ್ಯಕರ್ತರು ಎಲ್ಲಿಗೆ ಹೋಗಬೇಕು? ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ, ಗೆಲ್ಲುವುದೇ ದೊಡ್ಡ ಫೈಟ್. ಅಹಿಂದ ವರ್ಗಕ್ಕೆ ಟಿಕೆಟ್ ನೀಡುವ ಬಗ್ಗೆ ರಾಜ್ಯ ಮಟ್ಟದಲ್ಲಿ ಚರ್ಚೆ ಮಾಡಿದ್ದು, ಅಭ್ಯರ್ಥಿ ಆಯ್ಕೆ ಬಗ್ಗೆ ಸೂಕ್ತ ನಿರ್ಧಾರವನ್ನು ಪಕ್ಷ ಕೈಗೊಳ್ಳುತ್ತದೆ. ದಕ್ಷಿಣದಲ್ಲಿ ಸಾಮಾನ್ಯ ಕಾರ್ಯಕರ್ತ ಗೆಲ್ಲಬೇಕು. ಅದರ ಕಡೆಗೆ ಹೆಚ್ಚು ಗಮನ ಹರಿಸುತ್ತೇವೆ. ಶೀಘ್ರವೇ ರಾಜ್ಯ ನಾಯಕರು ದಾವಣಗೆರೆಗೆ ಬಂದು ಸಭೆ ಮಾಡಲಿದ್ದಾರೆ. ೨೦೨೮ರ ವಿಧಾನಸಭೆ ಚುನಾವಣೆಗೆ ಇನ್ನೂ ಸಮಯವಿದ್ದು, ಈಗಲೇ ತಾವು ಅಭ್ಯರ್ಥಿ ಅನ್ನುವವರು ಮುಂದೆ ಝೀರೋ ಆಗುತ್ತಾರೆ. ನಮ್ಮದು ರಾಷ್ಟ್ರೀಯ ಪಕ್ಷ. ಕಾರ್ಯಕರ್ತರ ಮೇಲೆ ಅವಲಂಬಿತ ಪಕ್ಷ ಎಂದು ಅವರು ಸೂಚ್ಯವಾಗಿ ಹೇಳಿದರು.
ದಾವಣಗೆರೆ ಬಿಜೆಪಿಯಲ್ಲಿ ಬಣ ಬಡಿದಾಟ ಇಲ್ಲವೇ ಇಲ್ಲ. ಜಿಲ್ಲಾ ಬಿಜೆಪಿಯಲ್ಲಿದ್ದ ಗೊಂದಲವೆಲ್ಲಾ ನಿವಾರಣೆಯಾಗಿದೆ. ಸಣ್ಣ ಪುಟ್ಟ ವ್ಯತ್ಯಾಸವಿರುತ್ತದೆ. ಅವೆಲ್ಲವನ್ನೂ ಸರಿ ಮಾಡಿಕೊಂಡಿದ್ದೇವೆ. ಅಮಿತ್ ಶಾ, ಜೆ.ಪಿ.ನಡ್ಡಾ, ನಿತಿನ್ ರನ್ನು ನಾವು ಭೇಟಿಯಾಗುತ್ತೇವೆ. ಆನಂತರವಷ್ಟೇ 2028ರವರೆಗೆ ರಾಜ್ಯಾಧ್ಯಕ್ಷರು ಮುಂದುವರೆಯುತ್ತಾರಾ? ಎಂಬ ಪ್ರಶ್ನೆಗೆ ಉತ್ತರಿಸುತ್ತೇನೆ. ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮಾತ್ರವಲ್ಲದೆ, ಯಾರೇ ಪಕ್ಷಕ್ಕೆ ಬಂದರೂ ಸೇರಿಸಿಕೊಳ್ಳುತ್ತೇವೆ ಎಂದರು.
ನಾನು 2028ಕ್ಕೂ ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ. ನನ್ನ ಆರೋಗ್ಯದಲ್ಲಿ ಒಂದಿಷ್ಟು ವ್ಯತ್ಯಾಸವಾಗಿದ್ದರಿಂದ ಲೋಕಸಭೆ ಚುನಾವಣೆ ವೇಳೆ ಓಡಾಡಲು ಆಗಿರಲಿಲ್ಲ. ಪಕ್ಷವು ಏಳೆಂಟು ಸಲ ನನ್ನ ಕುಟುಂಬಕ್ಕೆ ಟಿಕೆಟ್ ನೀಡಿದೆ. ನಾನು ರಾಜಕೀಯದಿಂದ ನಿವೃತ್ತಿಯಾಗುವುದಿಲ್ಲ. ಚುನಾವಣೆ ಸ್ಪರ್ಧೆಯಿಂದ ನಿವೃತ್ತಿ ಪಡೆದಿದ್ದೇನಷ್ಟೇ. ನಾಳೆ ಬಳ್ಳಾರಿಯಲ್ಲಿ ನಡೆಯುವ ಬಿಜೆಪಿ ಪ್ರತಿಭಟನೆಯಲ್ಲಿ ಭಾಗಯಾಗುತ್ತಿದ್ದೇನೆ ಎಂದು ಅವರು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ, ಜಗಳೂರು ಮಾಜಿ ಶಾಸಕ ಹೆಚ್.ಪಿ.ರಾಜೇಶ, ಪಕ್ಷದ ಮಾಜಿ ಅಧ್ಯಕ್ಷರಾದ ಯಶವಂತರಾವ್ ಜಾಧವ್, ಎಸ್.ಎಂ.ವೀರೇಶ ಹನಗವಾಡಿ, ಅಣಬೇರು ಜೀವನಮೂರ್ತಿ, ಮುಖಂಡರಾದ ಅನಿಲಕುಮಾರ ನಾಯ್ಕ, ಬಿ.ಎಸ್.ಜಗದೀಶ ಹಾಜರಿದ್ದರು.


