2.5 ವರ್ಷಗಳಲ್ಲಿ ಬೆಂಗಳೂರಿನಲ್ಲಿ ಬೃಹತ್ ಜೈವಿಕ ಉದ್ಯಾನ ನಿರ್ಮಾಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬಹುತೇಕ ಒಂದೂವರೆ ಶತಮಾನದ ಬಳಿಕ ಬೆಂಗಳೂರಿನಲ್ಲಿ ಮತ್ತೊಂದು ಬೃಹತ್ ಉದ್ಯಾನ ನಿರ್ಮಾಣದ ಕಲ್ಪನೆ ಸಾಕಾರವಾಗುತ್ತಿದ್ದು, ಮುಂದಿನ 2.5 ವರ್ಷಗಳಲ್ಲಿ ನಗರದಲ್ಲಿ ಬೃಹತ್ ಜೈವಿಕ ಉದ್ಯಾನ ನಿರ್ಮಾಣ ಮಾಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾಹಿತಿ ನೀಡಿದ್ದಾರೆ.

ಮಾದಪ್ಪನಹಳ್ಳಿ ನೆಡುತೋಪಿನಲ್ಲಿ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತದ ವಶದಲ್ಲಿರುವ ಭೂಮಿಯನ್ನು ಅರಣ್ಯ ಇಲಾಖೆಗೆ ವಿಧ್ಯುಕ್ತವಾಗಿ ಹಿಂಪಡೆಯಲು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಅಧಿಕೃತವಾಗಿ ಈ ಭೂಮಿಯನ್ನು ಅರಣ್ಯ ಇಲಾಖೆಗೆ ಪಡೆಯಲಾಗಿದ್ದು, ಮುಂದಿನ 2 ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ರಿಂದ ಉದ್ಯಾನವನಕ್ಕೆ ಶಂಕುಸ್ಥಾಪನೆ ಮಾಡಿಸಲಾಗುವುದು ಎಂದು ಹೇಳಿದರು.

ಯಲಹಂಕದ ಮಾದಪ್ಪನಹಳ್ಳಿಯಲ್ಲಿ 153 ಎಕರೆ ಜಮೀನಿನಲ್ಲಿ ಜೈವಿಕ ಉದ್ಯಾನವನ ಸ್ಥಾಪನೆಗೆ ಭೂಹಸ್ತಾಂತರದ ಮೂಲಕ ಮೊದಲ ಹೆಜ್ಜೆ ಇಡಲಾಗಿದೆ. ಈ ಪ್ರಕ್ರಿಯೆ ನನ್ನ ಸಮ್ಮುಖದಲ್ಲಿ ಇಂದು ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದು ನನ್ನ ಕನಸಿನ ಯೋಜನೆಯಾಗಿದ್ದು. ಬೆಂಗಳೂರು ಉತ್ತರದ ಜನರಿಗೆ ಹೊಸ “ಶ್ವಾಸತಾಣ” ಮತ್ತು ಪ್ರಕೃತಿ ಪ್ರವಾಸದ ತಾಣವಾಗಲಿದೆ. ಶುದ್ಧ ವಾತಾವರಣ, ಪರಿಸರ ಸಂರಕ್ಷಣೆ ಹಾಗೂ ಪರಿಸರ ಪ್ರವಾಸೋದ್ಯಮಕ್ಕೆ ಇದು ಉಪಯುಕ್ತವಾಗಲಿದೆ ಎಂದು ತಿಳಿಸಿದರು.

ಪ್ರಸ್ತುತ ಈ 154 ಎಕರೆ ಪ್ರದೇಶದಲ್ಲಿ ನೀಲಗಿರಿಯ ಜೊತೆಗೆ ಹೊನ್ನೆ, ಬೀಟೆ, ಜಾಲಿ, ಕಗ್ಗಲಿ, ಎಲಚಿ, ಚಿಗರೆ, ಹೊಳೆಮತ್ತಿ, ಮತ್ತಿ, ಕರಿಮತ್ತಿ ಮೊದಲಾದ 800 ಮರಗಳಿದ್ದು, ಅವುಗಳನ್ನು ಸಂರಕ್ಷಿಸಲಾಗುವುದು, ಕೆ.ಎಫ್.ಡಿ.ಸಿ. ನೀಲಗಿರಿ ಮರ ಬೆಳೆಸಿದ್ದು, ಆ ಮರಗಳನ್ನೂ ತೆರವು ಮಾಡಿ, ಸ್ಥಳೀಯ ಪ್ರಭೇದದ ಬಿಲ್ವ, ಮಹಾಬಿಲ್ವ, ಹೊನ್ನೆ, ನೇರಳೆ, ಮತ್ತಿ, ಆಲ, ಅರಳಿಯ ಜೊತೆಗೆ ಪಶ್ಚಿಮಘಟ್ಟದಲ್ಲಿ ಬೆಳೆಯುವ ವಿವಿಧ ಪ್ರಭೇದದ ಸಸ್ಯಗಳನ್ನೂ ಬೆಳೆಸಲು ಉದ್ದೇಶಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!