Saturday, November 22, 2025

ಯಕ್ಷಗಾನ ಕಲಾವಿದರ ಕುರಿತು ಬಿಳಿಮಲೆ ಹೇಳಿಕೆಗೆ ಭಾರೀ ಆಕ್ರೋಶ: ಕ್ಷಮೆಯಾಚಿಸಿದ KDA ಅಧ್ಯಕ್ಷ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳಾಗಿದ್ದು, ಅಲ್ಲಿ ಅಂಥ ಅನಿವಾರ್ಯತೆ ಇದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ವಿವಾದಾತ್ಮಕ ಹೇಳಿಕೆ ನಿದ್ದು, ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಇದರ ಬೆನ್ನಲ್ಲೇ ಯಕ್ಷಗಾನ ಕಲಾವಿದರಿಗೆ ಅವಮಾನ ಮಾಡಿಲ್ಲ, ಮಾಡುವ ಉದ್ದೇಶ ಕೂಡ ನನ್ನದಾಗಿರಲಿಲ್ಲ, ನನ್ನ ಹೇಳಿಕೆ ಬೇಸರವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ವಿಷಾದ ವ್ಯಕ್ತಪಡಿಸಿದ್ದಾರೆ.

ತಮ್ಮ ಹೇಳಿಕೆ ಮಾಧ್ಯಮಗಳಲ್ಲಿ ಪ್ರಸಾರವಾಗಿ ವಿವಾದವಾದ ಬೆನ್ನಲ್ಲೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದ ಅವರು, ನಿನ್ನೆ ಮೈಸೂರಿನ ಮಾನಸ ಗಂಗೋತ್ರಿ ಕಾರ್ಯಕ್ರಮದಲ್ಲಿ ಮಂಟೇಸ್ವಾಮಿ ಕಾವ್ಯವನ್ನು ಹಾಡುವ ಏಳು ಮಂದಿ ಕಲಾವಿದರ ಜೀವನ ಚರಿತ್ರೆ ಬಿಡುಗಡೆಯಾಗಿತ್ತು. ಆ ಪುಸ್ತಕವನ್ನು ಸಂಪಾದನೆ ಮಾಡಿದವರು ನನ್ನ ಗೆಳೆಯ ಕೃಷ್ಣಮೂರ್ತಿ ಆಲೂರು ಅವರು. ಆ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ನಾನು ಹೋಗಿದ್ದೆ. ಐದು ಆರು ವರ್ಷಗಳ ಹಿಂದೆ ದೀಕ್ಷೆ ತೆಗೆದುಕೊಂಡ ನೀಲಗಾರರೊಬ್ಬರು ತನ್ನ ಬದುಕಿನ ಕೊನೆಯವರೆಗೆ ಎಲ್ಲಿಯೂ ನಿಲ್ಲದೆ ನಿರಂತರವಾಗಿ ಚಲನೆಯಲ್ಲಿದ್ದನು. ಭಿಕ್ಷೆ ಬೇಡುವ ಸಂದರ್ಭದಲ್ಲಿ ಕಲಾವಿದ ಅನುಭವಿಸುವ ಬಿಕ್ಕಟ್ಟುಗಳು ಏನು ಎಂಬುದನ್ನು ಆ ಕಲಾವಿದರೇ ಹೇಳಿದ್ದಾರೆ. ಆ ಕಲಾವಿದರು ಹುಟ್ಟಿನಿಂದ ಬದುಕಿನ ವಿವಿಧ ಹಂತಗಳಲ್ಲಿ ಅನುಭವಿಸುವ ಸಮಸ್ಯೆಗಳನ್ನು ತೆರೆದಿಟ್ಟರು. ಕನ್ನಡಿಗರಿಗೆ ಇದು ಹೊಸ ಅನುಭವ.

ನನ್ನ ಊರಾದ ದಕ್ಷಿಣ ಕನ್ನಡದ ಯಕ್ಷಗಾನ ಕಲಾವಿದರ ಬದುಕಿನಲ್ಲಿಯೂ ಇಂತಹದ್ದೇ ಚಲನೆ ನಡೆಯುತ್ತಿತ್ತು ಎಂದು ನಾನು ಭಾಷಣ ಮಾಡುವಾಗ ಹೇಳಿದೆ. ಈಗ ಪರಿಸ್ಥಿತಿ ಬದಲಾಗಿದೆ. ಈಗ ಯಕ್ಷಗಾನ ಇಡೀ ರಾತ್ರಿ ನಡೆಯುವುದಿಲ್ಲ, ಸಂಜೆ 7 ಗಂಟೆಗೆ ಆರಂಭವಾದರೆ ರಾತ್ರಿ 11-12 ಗಂಟೆಗೆ ಮುಗಿಸುತ್ತಾರೆ. ಹಾಗಾಗಿ ಕಲಾವಿದರು ಬರುತ್ತಾರೆ, ವೇಷ ಹಾಕುತ್ತಾರೆ, ರಂಗದಲ್ಲಿ ಪ್ರದರ್ಶನ ನೀಡಿ ಕಾರುಗಳಲ್ಲಿ ತಮ್ಮ ತಮ್ಮ ಮನೆಗೆ ಹೋಗುತ್ತಾರೆ. ಮೊದಲಿನ ಸಮಸ್ಯೆ ಈಗಿಲ್ಲ ಎಂದರು.

ಮೊದಲೆಲ್ಲ ನವೆಂಬರ್ 26ರಂದು ಯಕ್ಷಗಾನ ಬಯಲಾಟ ಆರಂಭವಾದರೆ ಮೇ 26ರವರೆಗೆ 6 ತಿಂಗಳ ಪ್ರವಾಸ ನಡೆಯುತ್ತಿತ್ತು. ಈ ಆರು ತಿಂಗಳಲ್ಲಿ ಕಲಾವಿದರು ತಮ್ಮ ಮನೆಗಳಿಗೆ ಹೋಗುತ್ತಿದ್ದುದು ಒಂದೆರಡು ಬಾರಿ ಮಾತ್ರ. ಸುದೀರ್ಘವಾದ ಪಯಣದಲ್ಲಿ ಕಲಾವಿದ ಅನುಭವಿಸುವ ಹಲವು ಬಿಕ್ಕಟ್ಟು ಎದುರಿಸುತ್ತಿದ್ದರು. ಸ್ತ್ರೀ ವೇಷಧಾರಿಗಳಿಗೆ ಆಗುತ್ತಿದ್ದ ನೋವನ್ನು ಹೇಳಿದ್ದೇನೆ. ಈಗ ಯಕ್ಷಗಾನ ಸಂಜೆ ಆರಂಭವಾಗಿ ರಾತ್ರಿ ಮುಕ್ತಾಯವಾಗುತ್ತದೆ. ಕಾಲಮಿತಿಯಲ್ಲಿ ಯಕ್ಷಗಾನ ಮುಕ್ತಾಯವಾಗುತ್ತಿರುವ ಕಾರಣ ಕಲಾವಿದರು ರಾತ್ರಿಯೇ ಮನೆಗೆ ಬರುತ್ತಿದ್ದಾರೆ ಎಂದು ವಿವರಿಸಿದರು.

ಸಲಿಂಗಕಾಮ ಈಗ ಇಲ್ಲ. 60-70 ರ ದಶಕದಲ್ಲಿದ್ದಾಗ ಇದು ಯಕ್ಷಗಾನದಲ್ಲಿ ಇತ್ತು. ನಾನು ವಿದ್ಯಾರ್ಥಿಯಾಗಿದ್ದಾಗ ನೋಡಿದ್ದನ್ನು ಹೇಳಿದ್ದೇನೆ. ಯಾರನ್ನೂ ನೋಯಿಸುವ ಉದ್ದೇಶವನ್ನು ಈ ಹೇಳಿಕೆಯನ್ನು ನಾನು ನೀಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ನಾನು ಕಳೆದ 30 ವರ್ಷಗಳಿಂದ ಯಕ್ಷಗಾನವನ್ನು ಮಾಡುತ್ತಾ ಬಂದಿದ್ದೇನೆ. ಈಗಲೂ ತಾಳಮದ್ದಳೆ ಅರ್ಥವನ್ನು ಹೇಳುತ್ತಿದ್ದೇನೆ. ನನಗೆ ಯಕ್ಷಗಾನದ ಬಗ್ಗೆ ಬಹಳಷ್ಟು ಗೌರವವಿದೆ ಎಂದರು.

error: Content is protected !!