ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಸರಗೋಡು ಜಿಲ್ಲೆಯ ಕರಾವಳಿ ಭಾಗಗಳ ಕಡಲಿನಲ್ಲಿ ಭಾನುವಾರ (ಜು.5) ರಾತ್ರಿ 11.30ರವರೆಗೆ 2.9ರಿಂದ 3.5 ಮೀಟರ್ ಎತ್ತರದ ಅಲೆಗಳು ಅಪ್ಪಳಿಸುವ ಸಾಧ್ಯತೆ ಇರುವುದರಿಂದ ಕರಾವಳಿ ನಿವಾಸಿಗಳು ಮತ್ತು ಮೀನುಗಾರರು ಅತ್ಯಂತ ಎಚ್ಚರಿಕೆಯಿಂದಿರಬೇಕು ಎಂದು ಹವಾಮಾನ ಇಲಾಖೆ ಸೂಚಿಸಿದೆ.
ಕುಂಜತ್ತೂರಿನಿಂದ ಕೋಟಕುನ್ನುವರೆಗಿನ ಕರಾವಳಿ ಪ್ರದೇಶಗಳಲ್ಲಿ ಸಮುದ್ರ ಅಬ್ಬರಿಸುವ ಸಾಧ್ಯತೆ ಇರುವುದರಿಂದ ತಗ್ಗು ಪ್ರದೇಶಗಳಲ್ಲಿ ವಾಸಿಸುವವರು ಪರಿಸ್ಥಿತಿಯ ಮೇಲೆ ನಿಗಾ ಇಟ್ಟುಕೊಂಡು, ಅಗತ್ಯವಿದ್ದರೆ ಅಧಿಕಾರಿಗಳ ಸೂಚನೆಯಂತೆ ಸುರಕ್ಷಿತ ಶಿಬಿರಗಳು ಅಥವಾ ಸಂಬಂಧಿಕರ ಮನೆಗಳಿಗೆ ತೆರಳುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಈ ಅವಧಿಯಲ್ಲಿ ಸಣ್ಣ ದೋಣಿಗಳು, ಮೀನುಗಾರಿಕಾ ದೋಣಿಗಳು ಹಾಗೂ ವಿಹಾರ ನೌಕೆಗಳನ್ನು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಬಂದರುಗಳಲ್ಲಿ ನಿಲ್ಲಿಸಿರುವ ದೋಣಿಗಳನ್ನು ಸುರಕ್ಷಿತವಾಗಿ ಕಟ್ಟಿಹಾಕಿ, ಅವುಗಳ ನಡುವೆ ಸೂಕ್ತ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. ಮೀನುಗಾರಿಕಾ ಬಲೆಗಳು ಹಾಗೂ ಇತರ ಉಪಕರಣಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಮುಂಗಾರು ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ಕಡಲತೀರ ಪ್ರವಾಸೋದ್ಯಮ ಸೇರಿದಂತೆ ಸಮುದ್ರ ಕೇಂದ್ರೀಕೃತ ಎಲ್ಲ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಎಚ್ಚರಿಕೆ ಹಿಂತೆಗೆದುಕೊಳ್ಳುವವರೆಗೆ ಕಡಲತೀರಕ್ಕೆ ಸಾರ್ವಜನಿಕರು ತೆರಳದಂತೆ ಹಾಗೂ ಸಮುದ್ರದಲ್ಲಿ ಮನರಂಜನಾ ಚಟುವಟಿಕೆಗಳನ್ನು ನಡೆಸದಂತೆ ಸೂಚಿಸಲಾಗಿದೆ. ಕರಾವಳಿ ಭಾಗದಲ್ಲಿ ವಾಸಿಸುವವರು ಯಾವುದೇ ತುರ್ತು ಪರಿಸ್ಥಿತಿ ಎದುರಾದರೆ ಸ್ಥಳೀಯ ಆಡಳಿತ ಮತ್ತು ವಿಪತ್ತು ನಿರ್ವಹಣಾ ಅಧಿಕಾರಿಗಳ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಲಾಗಿದೆ.



