ಹೊಸದಿಗಂತ ವರದಿ, ಮಂಗಳೂರು:
ಕಳೆದ ಹಲವು ದಶಕಗಳಿಂದ ವಿವಿಧ ಸಂತ್ರಸ್ತರಿಂದ ಯಾವುದೇ ರೀತಿಯಲ್ಲಿ ಆರ್ಥಿಕ ನೆರವು ಪಡೆಯದೆ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಕಾರ್ಯಕರ್ತರು ತೊಂದರೆಗೆ ಒಳಗಾದವರಿಗೆ ನೆರವಾಗುವ ಪ್ರಾಮಾಣಿಕ ಪ್ರಯತ್ನ ಮಾಡಿಕೊಂಡು ಬಂದಿದ್ದಾರೆ. ಈ ವಿಶ್ವಾಸಾರ್ಹ ಪರಂಪರೆ ಮುಂದುವರಿಯಬೇಕು ಎಂದು ಸಾಮಾಜಿಕ ಹೋರಾಟಗಾರ ಡಾ. ರವೀಂದ್ರನಾಥ ಶಾನುಭಾಗ್ ಹೇಳಿದರು.
ಡಾ. ರವೀಂದ್ರನಾಥ ಶಾನುಭಾಗ್ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಬಸ್ರೂರು ಬಳಕೆದಾರರ ವೇದಿಕೆ ಮತ್ತು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಉಡುಪಿ ಇದರ ದಕ್ಷಿಣ ಕನ್ನಡ ಜಿಲ್ಲಾ ಶಾಖೆ ನಗರದ ಅಶೋಕನಗರ ಶ್ರೀ ಶಾಸ್ತಾ ಕಟ್ಟಡದಲ್ಲಿ ಭಾನುವಾರ ಉದ್ಘಾಟನೆಗೊಂಡಿತು.
‘ಪ್ರಜೆಗಳು ಮತ್ತು ಸಂವಿಧಾನ’ ಕೃತಿ ಅನಾವರಣಗೊಳಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದ ಡಾ.ರವೀಂದ್ರನಾಥ ಶಾನುಭಾಗ್, ಮುಂದಿನ ದಿನಗಳಲ್ಲಿ ಮಂಗಳೂರು ಕೇಂದ್ರೀಕರಿಸಿ ಪ್ರತಿಷ್ಠಾನದ ಚಟುವಟಿಕೆಗಳು ಮುಂದುವರಿಯಲಿವೆ. ಪ್ರತಿಷ್ಠಾನದ ಸೇವಾ ತಂಡದಲ್ಲಿ ಇರುವ ಮುಖಂಡರು ವಾರದಲ್ಲಿ ಒಂದು ದಿನ ನಿರ್ದಿಷ್ಟ ಅವಧಿ ಯಲ್ಲಿ ಮಂಗಳೂರು ಅಶೋಕನಗರದಲ್ಲಿರುವ ಕಚೇರಿಯಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದ್ದಾರೆ. ಅಗತ್ಯ ಸಂದರ್ಭಗಳಲ್ಲಿ ಸಂಬಂಧಪಟ್ಟವರ ಜತೆ ಆನ್‌ಲೈನ್ ದೂರವಾಣಿ ಮೂಲಕ ಸಂಪರ್ಕದಲ್ಲಿ ಇರುತ್ತೇನೆ ಎಂದು ಹೇಳಿದರು.
ಜಿಲ್ಲೆಯ ಪುತ್ತೂರು, ಬೆಳ್ತಂಗಡಿ, ಕಡಬ, ಸುಳ್ಯ ಮತ್ತಿತರ ಕಡೆಗಳ ಜನರು ಆ ಭಾಗದಲ್ಲೇ ಇರುವ ಪ್ರತಿಷ್ಠಾನದ ಮುಖಂಡರ ಮೂಲಕ ಅಹವಾಲುಗಳನ್ನು ಸಲ್ಲಿಸಬಹುದು. ಅನೇಕ ವಕೀಲರು ಚಿಕ್ಕಾಸು ಪಡೆಯದೆ ಹೈಕೋರ್ಟ್‌ನಲ್ಲಿ ಕೂಡ ಪರಿಷತ್ತಿನ ಪ್ರಕರಣಗಳಿಗೆ ನ್ಯಾಯ ಒದಗಿಸಿ ಕೊಟ್ಟಿದ್ದಾರೆ ಎಂದರು.
ಸಂಜೀವ ಕಬಕ ಆಯ್ಕೆ
ಬಸ್ರೂರು ಬಳಕೆದಾರರ ವೇದಿಕೆ ಮತ್ತು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಉಡುಪಿ ಇದರ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಅಧ್ಯಕ್ಷರಾಗಿ ಹಿರಿಯ ಸಾಮಾಜಿಕ ಕಾರ್ಯಕರ್ತ ಸಂಜೀವ ಕಬಕ ಆಯ್ಕೆಯಾಗಿದ್ದಾರೆ.
ಪ್ರತಿಷ್ಠಾನದ ಕಾನೂನು ಸಲಹೆಗಾರರು ಹಾಗೂ ವಕೀಲರಾದ ವಿದ್ಯಾ ಭಟ್, ಜೀನೇಂದ್ರ ಕುಮಾರ್, ಜಯಶ್ರೀ, ಸಾಮಾಜಿಕ ಕಾರ್ಯಕರ್ತರಾದ ದಿನೇಶ್ ಭಟ್, ಅಶೋಕ್ ಭಟ್, ಕೆ.ಎಂ.ಕೋಟ್ಯಾನ್, ಸಂಜೀವ ಕಬಕ, ನಿಶಾಂತ್ ವಿಟ್ಲ ಉಪಸ್ಥಿತರಿದ್ದರು. ಶಶಿಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.