ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನುಷ್ಯರ ಹಲ್ಲುಗಳನ್ನು ಅಪಾಯಕಾರಿ ಆಯುಧವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ತನ್ನ ನಾದಿನಿ ಕಚ್ಚಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ದೂರಿನ ಮೇರೆಗೆ ದಾಖಲಾಗಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸಿ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಹೈಕೋರ್ಟ್‌ನ ಔರಂಗಾಬಾದ್ ಪೀಠದ ನ್ಯಾಯಮೂರ್ತಿಗಳಾದ ವಿಭಾ ಕಂಕನ್ವಾಡಿ ಮತ್ತು ಸಂಜಯ್ ದೇಶಮುಖ್ ಅವರಿದ್ದ ಪೀಠವು, ದೂರುದಾರರು ಸಲ್ಲಿಸಿರುವ ವೈದ್ಯಕೀಯ ಪ್ರಮಾಣಪತ್ರಗಳು ಹಲ್ಲಿನಿಂದ ಉಂಟಾದ ಸರಳ ಗಾಯವನ್ನು ಮಾತ್ರ ತೋರಿಸುತ್ತವೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಮಹಿಳೆಯ ದೂರಿನ ಮೇರೆಗೆ 2020ರ ಏಪ್ರಿಲ್‌ನಲ್ಲಿ ದಾಖಲಾಗಿರುವ ಎಫ್‌ಐಆರ್ ಪ್ರಕಾರ, ಜಗಳದ ಸಮಯದಲ್ಲಿ, ನಾದಿನಿ ಆಕೆಯನ್ನು ಕಚ್ಚಿದ್ದಾರೆ. ಈ ಅಪಾಯಕಾರಿ ಆಯುಧದಿಂದ ತನಗೆ ಹಾನಿಯಾಗಿದೆ ಎಂದು ಆರೋಪಿಸಿದ್ದಾರೆ.
ಆದ್ರೆ ಮನುಷ್ಯರ ಹಲ್ಲುಗಳನ್ನು ಅಪಾಯಕಾರಿ ಆಯುಧ ಎಂದು ಹೇಳಲು ಸಾಧ್ಯವಿಲ್ಲ ಎಂದ ನ್ಯಾಯಾಲಯ, ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸಿ ಎಫ್‌ಐಆರ್ ಅನ್ನು ರದ್ದುಗೊಳಿಸಿದೆ.
ಅಪಾಯಕಾರಿ ಆಯುಧವನ್ನು ಬಳಸಿ ಸಾವು ಅಥವಾ ಗಂಭೀರ ಹಾನಿಯನ್ನುಂಟುಮಾಡುವ ಪ್ರಕರಣವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 324ರ ಅಡಿಯಲ್ಲಿ ಬರುತ್ತದೆ. ಸದ್ಯದ ಪ್ರಕರಣದಲ್ಲಿ ದೂರುದಾರರ ವೈದ್ಯಕೀಯ ಪ್ರಮಾಣಪತ್ರಗಳು ಹಲ್ಲಿನ ಗುರುತುಗಳಿಂದ ಉಂಟಾದ ಸರಳ ಗಾಯವನ್ನು ಮಾತ್ರ ತೋರಿಸುತ್ತವೆ ಎಂದು ನ್ಯಾಯಾಲಯ ಹೇಳಿದೆ.
ಸೆಕ್ಷನ್ 324ರ ಅಡಿಯಲ್ಲಿ ಅಪರಾಧ ಸಾಬೀತಾಗದಿದ್ದಾಗ, ಆರೋಪಿಯನ್ನು ವಿಚಾರಣೆ ಎದುರಿಸುವಂತೆ ಮಾಡುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ. ಹೀಗಾಗಿ, ಎಫ್‌ಐಆರ್ ರದ್ದುಗೊಳಿಸಲಾಗಿದೆ.