ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸತ್‌ನಲ್ಲಿ ಹಿಂದುಗಳು ಹಾಗೂ ಹಿಂದುತ್ವದ ಕುರಿತು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮಾಡಿದ ಆರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಖಡಕ್ ಆಗಿ ಲೋಕಸಭೆಯಲ್ಲಿ ತಿರುಗೇಟು ನೀಡಿದರು.
ಹಿಂದುತ್ವವನ್ನು, ಹಿಂದುಗಳನ್ನು ಅವಮಾನಿಸುವುದೇ ಕಾಂಗ್ರೆಸ್ ಉದ್ದೇಶ. ಇದೇ ಕಾರಣಕ್ಕಾಗಿ ಕಾಂಗ್ರೆಸ್ ನಾಯಕರೊಬ್ಬರು ಸಂಸತ್‌ನಲ್ಲಿ ಹಿಂದುಗಳ ಕುರಿತು ಮಾತನಾಡಿದ್ದಾರೆ. ಇದನ್ನು ಇಡೀ ದೇಶವೇ ನೋಡಿದೆ ಎಂದು ಟೀಕಿಸಿದರು.
ಸ್ವಾಮಿ ವಿವೇಕಾನಂದರು ಯಾವ ಧರ್ಮದ ಕುರಿತು ಅಭಿಮಾನದಿಂದ ಹೇಳಿದ್ದರೋ, ಯಾವ ಧರ್ಮದ ಮಹತ್ವ, ಸಹಿಷ್ಣುತೆಯನ್ನು ಜಗತ್ತಿಗೇ ತಿಳಿಸಿದ್ದರೋ, ಅದೇ ಧರ್ಮದವರು ನಾವು. ಹಿಂದು ಧರ್ಮವು ಎಂದಿಗೂ ದ್ವೇಷ, ಹಿಂಸೆಯನ್ನು ಪ್ರಚೋದಿಸಿಲ್ಲ. ಬಿಜೆಪಿಯು ಇಂತಹ ಧರ್ಮದಲ್ಲಿ ನಂಬಿಕೆ ಇರಿಸಿದ್ದು, ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ ಹಿಂದುಗಳನ್ನು ಅವಮಾನಿಸುತ್ತಿದೆ. ಹಿಂದುಗಳು ಕಾಂಗ್ರೆಸ್‌ನ ಈ ಷಡ್ಯಂತ್ರವನ್ನು ತಿಳಿಯಬೇಕು. ದೇಶದಲ್ಲಿ ಹಿಂದುಗಳು ಕಾಂಗ್ರೆಸ್ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಹೇಳಿದರು.
ಹಿಂದುಗಳ ಕುರಿತು ರಾಹುಲ್ ಗಾಂಧಿ ಅವರು ಸುಳ್ಳುಗಳನ್ನು ಹರಡಿಸುತ್ತಿದ್ದಾರೆ. ಹಿಂದುಗಳು ಹಿಂಸಾವಾದಿಗಳು ಎಂದು ಹೇಳುವ ಮೂಲಕ ಪ್ರಚೋದನೆ ನೀಡುತ್ತಿದೆ. ಇದು ಕಾಂಗ್ರೆಸ್ ಹಾಗೂ ಕಾಂಗ್ರೆಸ್ ನಾಯಕನ ಸಂಸ್ಕೃತಿ, ಇದು ನಿಮ್ಮ ವ್ಯಕ್ತಿತ್ವ, ಇವು ನಿಮ್ಮ ಕೆಟ್ಟ ವಿಚಾರಗಳು, ಹಿಂದುಗಳ ಮೇಲೆ ನೀವು ಹೊಂದಿರುವ ದ್ವೇಷ, ನಿಮ್ಮ ಚಟುವಟಿಕೆಗಳು ಹಿಂದುಗಳ ವಿರೋಧಿಯಾಗಿವೆ. ಇದನ್ನು ಹಿಂದುಗಳು ಗಮನಿಸುತ್ತಿದ್ದಾರೆಎಂದು ವಾಗ್ದಾಳಿ ನಡೆಸಿದರು.