ದಿಗಂತ ವರದಿ ವಿಜಯನಗರ (ಹಂಪಿ):
ವಿಜಯನಗರ ಅರಸರ ಸಾಮ್ರಾಜ್ಯ, ಹಂಪಿ ದೇಶವಷ್ಟೇ ಅಲ್ಲ ವಿಶ್ವದ ಗಮನಸೆಳೆದಿದೆ, ಮುಂಬರುವ ದಿನಗಳಲ್ಲಿ ಹಂಪಿಯ ಅಭಿವೃದ್ಧಿ ಚಿತ್ರಣವೇ ಬದಲಾಗಲಿದೆ ಎಂದು ಕೇಂದ್ರ ಪ್ರವಾಸೋದ್ಯಮ, ಸಂಸ್ಕೃತಿ ಸಚಿವ ಜಿ.ಕಿಶನ್ ರೆಡ್ಡಿ ಅವರು ಹೇಳಿದರು.
ಹಂಪಿಯಲ್ಲಿ 75ನೇ ಸ್ವಾತಂತ್ರ್ಯೋತ್ಸವ ಆಜಾದಿಕಾ ಅಮೃತ ಮಹೋತ್ಸವ ನಿಮಿತ್ತ ಶ್ರೀ ಪಟ್ಟಾಭಿರಾಮ ದೇವಾಲಯದಲ್ಲಿ ಶುಕ್ರವಾರ ಭಾರತೀಯ ಪುರಾತತ್ವ ಇಲಾಖೆ ಹಾಗೂ ಜಿಲ್ಲಾಡಳಿತದ ಆಶ್ರಯದಲ್ಲಿ ‘ದೇವಯಾತನಂ-ಭಾರತೀಯ ದೇವಾಲಯ ವಾಸ್ತುಶಿಲ್ಪ ಅದ್ಭುತ ಮಹಾಕಾವ್ಯ’ ಕುರಿತ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು. ದೇಶದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲೊಂದಾದ ಹಂಪಿಯ ಅಭಿವೃದ್ಧಿಗೆ ಸರ್ಕಾರ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ, ಹಂಪಿಯ ಇತಿಹಾಸ ಮಹತ್ವದ್ದಾಗಿದೆ, ರಾಜ್ಯ, ದೇಶ ಸೇರಿದಂತೆ ವಿಶ್ವದ ನಾನಾ ಮೂಲೆಗಳಿಂದ ಪ್ರವಾಸಿಗರು ಹಂಪಿಗೆ ಭೇಟಿ ನೀಡುತ್ತಿದ್ದು, ಅಗತ್ಯ ಮೂಲ ಸೌಲಭ್ಯ ಸೇರಿದಂತೆ ಮಾದರಿ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ರಾಜ್ಯ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಮಾತನಾಡಿ, ಹಂಪಿಯ ವಿಜಯನಗರ ಸಾಮ್ರಾಜ್ಯದಲ್ಲಿ ಹುಟ್ಟಿದ ನಾವೆಲ್ಲರೂ ಹೆಮ್ಮೆಪಡಬೇಕು, ಗಂಡು ಮೆಟ್ಟಿದ ನಾಡಲ್ಲಿ ನಾವು ಜನಿಸಿದ್ದೇವೆ, ಶ್ರೀ ವಿದ್ಯಾರಣ್ಯರ ಕನಸಿನಂತೆ ವಿಜಯನಗರ ಸಾಮ್ರಾಜ್ಯ ಆರಂಭವಾಗಿದೆ. ಹಂಪಿಯ ಪ್ರತಿಯೊಂದು ಸ್ಮಾರಕಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಶ್ರೀ ಕೃಷ್ಣದೇವರಾಯ ಸೇರಿದಂತೆ ಮಹಾನ್ ಪುರುಷರು ನಡೆದಾಡಿದ ಈ ಸ್ಥಳದ ಮಹಿಮೆಯೇ ಅಪಾರ, ಇಲ್ಲಿನ ಪ್ರತಿಯೊಂದು ಶಿಲ್ಪಿಗಳು ಶ್ರೀಕೃಷ್ಣದೇವರಾಯರ ಇತಿಹಾಸವನ್ನು ಸಾರುತ್ತಿವೆ. ಸ್ಮಾರಕಗಳ ಸಂರಕ್ಷಣೆ, ಇಲ್ಲಿನ ಪರಿಸರ ರಕ್ಷಣೆಗಾಗಿ ಶ್ರಮಿಸುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರದ್ದಾಗಿದೆ ಎಂದರು. ಮುಂದಿನ ಪೀಳಿಗೆಗೆ ಹಂಪಿಯ ಇತಿಹಾಸ ತಿಳಿಸಲು ಸ್ಮಾರಕಗಳನ್ನು ರಕ್ಷಿಸಬೇಕು, ಮತ್ತೆ ಇಂತಹ ಇತಿಹಾಸವನ್ನು ಕಟ್ಟಲು ಪರ್ಯಾಯ ಯಾವುದೂ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದರು. ವಿಜಯನಗರದ ಸಂಶೋಧನೆಗೆ ಹೋಲಿಸಿದರೇ ನಾವು ಶೇ.10ರಷ್ಟು ಕೂಡಾ ಸಾಧನೆ ಮಾಡಿಲ್ಲ ಎಂದು ಉಲ್ಲೇಖಿಸಿದರು.
ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಮಾತನಾಡಿ, ವಿಸ್ವಪ್ರಸಿದ್ಧ ಹಂಪಿ ಪ್ರವಾಸೋದ್ಯಮದ ಕಿರೀಟ, ಈ ಸಮ್ಮೇಳನ ಹಂಪಿಯಲ್ಲಿ ನಡೆಯುತ್ತಿರುವುದು ಸಂತಸ ಮೂಡಿಸಿದೆ. ಹಂಪಿಯ ಪ್ರತಿ ಕಲ್ಲಿನಲ್ಲೂ ಇಲ್ಲಿನ ಸಂಸ್ಕೃತಿ ಕಾಣಲಿದೆ. ವಿಶ್ವದಲ್ಲೇ ಹಂಪಿಯದ್ದೇ ಪ್ರತ್ಯೇಕ ಗುರುತಿಸುವಿಕೆ ಇದೆ ಎಂದರು. ಈ ಸಂದರ್ಭದಲ್ಲಿ
ಶಾಸಕ ಸೋಮಶೇಖರ್ ರೆಡ್ಡಿ ಸೇರಿದಂತೆ, ವೀರಶೇಖರ ರೆಡ್ಡಿ, ಕೃಷ್ಣಾ ರೆಡ್ಡಿ ಇನ್ನಿತರರು ಉಪಸ್ಥಿತರಿದ್ದರು.