January15, 2026
Thursday, January 15, 2026
spot_img

ಹುಣಸೇಕಟ್ಟೆ ‘ಜೈ ಹನುಮಾನ್ ‘ ಖ್ಯಾತಿಯ ಹಬ್ಬದ ಹೋರಿ ಸಾವು

ಹೊಸದಿಗಂತ ವರದಿ, ಶಿವಮೊಗ್ಗ

ಶಿರಾಳಕೊಪ್ಪ ಸಮೀಪದ ಹುಣಸೇಕಟ್ಟೆ ಗ್ರಾಮದ ಜೈ ಹನುಮಾನ್ ಎಂದೇ ಪ್ರಸಿದ್ಧವಾಗಿದ್ದ ಹಬ್ಬದ ಹೋರಿ(17ವರ್ಷ) ಶನಿವಾರ ಬೆಳಗಿನ ಜಾವ ಅನಾರೋಗ್ಯದಿಂದ ಮೃತಪಟ್ಟಿದೆ. ದಶಕಗಳ ಕಾಲ ಜಿಲ್ಲೆ ಸೇರಿದಂತೆ ಹಾವೇರಿ, ಉತ್ತರ ಕನ್ನಡ ಸುತ್ತಲಿನ ಜಿಲ್ಲೆಗಳಲ್ಲಿ ಎಲ್ಲಿಯೇ ಹೋರಿ ಬೆದರಿಸುವ ಸ್ಪರ್ಧೆ ನಡೆಯಲಿ ಅಲ್ಲಿ ಹುಣಸೇಕಟ್ಟೆ ಜೈ ಹನುಮಾನ್ ಸ್ಪರ್ಧಿಸುತ್ತಿತ್ತು.

ಅಖಾಡದಲ್ಲಿ ಜೈ ಹನುಮಾನ್ ಹೋರಿ ಬರುತ್ತದೆ ಎಂದೊಡನೆ ಪ್ರೇಕ್ಷಕರ ಹಾಗೂ ಅಭಿಮಾನಿಗಳ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿ ಕೇಳಿ ಬರುತ್ತಿದ್ದವು. ಅಖಾಡದಲ್ಲಿ ಮಿಂಚಿನ ಓಟ ಹಾಗೂ ಆಕ್ಷನ್ ಮೂಲಕವೇ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದ ಹೋರಿ ಇನ್ನು ನೆನಪು ಮಾತ್ರ.

ಹೋರಿ ಹಬ್ಬದ ಮೂಲಕವೇ ಹುಣಸೇಕಟ್ಟೆ ಗ್ರಾಮಕ್ಕೆ ಹೆಸರು ತಂದ ಕೀರ್ತಿ ಜೈ ಹನುಮಾನ್ ಹೋರಿಗೆ ಸಲ್ಲುತ್ತದೆ. ಸೊರಬ ತಾಲೂಕಿನ ಕುದುರೆಗಣಿ ಗ್ರಾಮದಲ್ಲಿ ಬಂಪರ್ ಬಹುಮಾನ ಬೈಕ್ ಸೇರಿದಂತೆ ವಿವಿಧಡೆ ಒಂದು ತೊಲ ಬಂಗಾರ, ಐದು ಗಾದ್ರೇಜ್, ಡ್ರೆಸಿಂಗ್ ಟೇಬಲ್ ಗಳು, ಟಿವಿಗಳು, ರೆಫ್ರಿಜರೇಟರ್ ಗಳು ಹೀಗೆ ನೂರಾರು ಬಹುಮಾನಗಳನ್ನು ಗೆಲ್ಲುವ ಮೂಲಕ ಹೋರಿ ಹಬ್ಬದಲ್ಲಿ ಇತಿಹಾಸ ಸೃಷ್ಠಿಸಿತ್ತು ಜೈ ಹನುಮಾನ್ ಹೆಸರಿನ ಹೋರಿ.

ಶಿಕಾರಿಪುರ ತಾಲೂಕಿನ ಹುಣಸೇಕಟ್ಟೆ ಗ್ರಾಮದ ತುಕಾರಾಮ್ ಅವರು ಜೈ ಹನುಮಾನ್ ಹೋರಿಯನ್ನು ಸಲುಹಿದ್ದರು.

ಹೋರಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲೆ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಸಾವಿರಾರು ಅಭಿಮಾನಿಗಳು ಆಗಮಿಸಿ ಅಂತಿಮ ದರ್ಶನ ಪಡೆದರು. ಹೋರಿಯ ಮಾಲೀಕರು ಮತ್ತು ಅಭಿಮಾನಿಗಳು ನಡೆಸಿದ ಹೋರಿಯ ಅಂತಿಮಯಾತ್ರೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ವಿವಿಧ ವಾಧ್ಯಗಳೊಂದಿಗೆ ಪಟಾಕಿ ಸಿಡಿಸುವ ಮೂಲಕ ಹೋರಿಯ ಅಂತಿಮ ಯಾತ್ರೆ ನಡೆಸಲಾಯಿತು.

Most Read

error: Content is protected !!