May 10, 2026
Sunday, May 10, 2026
spot_img

ಬೆಳೆಗಳ ರಾಶಿಗೆ ಆಕಸ್ಮಿಕ ಬೆಂಕಿ: ಸುಟ್ಟು ಕರಕಲಾದ ತೊಗರಿ, ಜೋಳದ ತೆನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಪ್ರಮಾಣದ ತೊಗರಿ ಬೆಳೆ ಹಾನಿಯಾದ ಘಟನೆ ತಾಲೂಕಿನ ಶಿರುಂಜ ಗ್ರಾಮದಲ್ಲಿ ನಡೆದಿದೆ.

ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯು ಕ್ಷಣಾರ್ಧದಲ್ಲಿ ವ್ಯಾಪಿಸಿ ಗೌರವ್ವ ಕೊಂಡಿಕೊಪ್ಪದ ಅವರಿಗೆ ಸೇರಿದ ಅಂದಾಜು ೩ ಎಕರೆಯಲ್ಲಿ ಬೆಳೆದಿದ್ದ ತೊಗರೆ ಬೆಳೆ ಸಂಪೂರ್ಣ ಸುಟ್ಟು ಕರಕಲಾಗಿ ಅಪಾರ ಪ್ರಮಾಣದ ಹಾನಿಯಾಗಿದೆ.

ಅದೇ ರೀತಿ ಗಂಗವ್ವ ಗೌಳೇರ ಅವರು ತಮ್ಮ ೭ ಎಕರೆ ಹೊಲದಲ್ಲಿ ಬೆಳೆದ ತೊಗರಿ ಬೆಳೆಯನ್ನ ಕಟಾವು ಮಾಡಿ, ಒಕ್ಕಣೆ ಮಾಡಲು ಕಣದಲ್ಲಿ ತಂದು ಹಾಕಿದ್ದ ತೊಗರಿ ಬೆಳೆ ಸೇರಿ, ೧೫ ಚೀಲ ಜೋಳದ ತೆನೆ ರಾಶಿ, ೨ ಟ್ರ್ಯಾಕ್ಟರ್ ಕಡ್ಲಿ ಹೊಟ್ಟು, ೨ ಟ್ರ್ಯಾಕ್ಟರ್ ಶೇಂಗಾ ಹೊಟ್ಟು, ತಾಡಪತ್ರಿಗಳು ಸುಟ್ಟು ಕರಕಲಾಗಿ ಲಕ್ಷಾಂತರ ರೂಪಾಯಿ ಹಾನಿಯಾಗಿದೆ.
ಸ್ಥಳೀಯರ ಪ್ರಕಾರ, ಗಾಳಿಯ ತೀವ್ರತೆಗೆ ಬೆಂಕಿ ವೇಗವಾಗಿ ಹರಡಿದ್ದು, ರೈತರು ಮತ್ತು ಗ್ರಾಮಸ್ಥರು ತಕ್ಷಣವೇ ನೀರು ಹಾಗೂ ಮಣ್ಣಿನ ಸಹಾಯದಿಂದ ಬೆಂಕಿ ಆರಿಸಲು ಪ್ರಯತ್ನಿಸಿದರು. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅದಾಗಲೇ ಅಪಾರ ಪ್ರಮಾಣದ ರೈತರ ಬೆಳೆ ನಾಶವಾಗಿದೆ.

ಈ ಘಟನೆಯಿಂದ ಲಕ್ಷಾಂತರ ರುಪಾಯಿ ಮೌಲ್ಯದ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ. ಬೆಳೆ ಕಟಾವು ಹಂತದಲ್ಲಿದ್ದ ಕಾರಣ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.

ಹಾನಿಗೊಳಗಾದ ರೈತರು ಸರ್ಕಾರದಿಂದ ತಕ್ಷಣ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಈ ಕುರಿತು ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !