ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತ ಮಳೆಯಿಂದ ಜಲಾವೃತವಾಗಿದೆ. ಈ ನಡುವೆ ಪ್ರವಾಹದ ನೀರಿನಲ್ಲಿ 200ಕ್ಕೂ ಹೆಚ್ಚು ಕಾರುಗಳು ಮುಳುಗಿರುವ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಗ್ರೇಟರ್ ನೋಯ್ಡಾದ ಇಕೋಟೆಕ್-3 ಬಳಿ ಚಿತ್ರೀಕರಿಸಲಾದ ವೀಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹಿಂಡೋನ್ನಲ್ಲಿ ನೀರಿನ ಮಟ್ಟ ಹೆಚ್ಚಾದ ಕಾರಣ ಸಮೀಪವಿರುವ ಮನೆಗಳಿಂದ ಅನೇಕ ಜನರನ್ನು ಸ್ಥಳಾಂತರಿಸಲಾಯಿತು. ಪೀಡಿತ ಪ್ರದೇಶಗಳಲ್ಲಿ ನೋಯ್ಡಾ ಸೆಕ್ಟರ್ 63 ರಲ್ಲಿ ಇಕೋಟೆಕ್ ಮತ್ತು ಚಿಜಾರ್ಸಿ ಸೇರಿವೆ. ಇಂದು ಮುಂಜಾನೆ ನೋಯ್ಡಾ ಮತ್ತು ದೆಹಲಿ ಪ್ರದೇಶದ ಇತರ ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ.
ಸೌರಾಷ್ಟ್ರ-ಕಚ್ ಪ್ರದೇಶ, ಮಧ್ಯ ಮಹಾರಾಷ್ಟ್ರ, ಗೋವಾ ಮತ್ತು ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಮುನ್ಸೂಚನೆ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ಗುಜರಾತಿನಲ್ಲಿ ಮಳೆ ಕಡಿಮೆಯಾಗಿರುವುದರಿಂದ ಪ್ರವಾಹ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ.