ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಡತನದಿಂದ ಬೇಸತ್ತು ತಾಯಿಯೊಬ್ಬಳು ತನ್ನ ಒಂದೂವರೆ ವರ್ಷದ ಮಗುವನ್ನು ತೀಸ್ತಾ ನದಿಗೆ ಎಸೆದಿರುವ ಘಟನೆ ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ನಡೆದಿದೆ.
ಘಟನೆ ಸಮಯದಲ್ಲಿ ಅಲ್ಲೇ ಇದ್ದ ಸ್ಥಳೀಯರು ಕೂಡಲೇ ಓಡಿ ಬಂದು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸೀಮಾ ದಿನಗಟ್ಟಲೆ ಹೊಟ್ಟೆಗೆ ಕೂಳಿಲ್ಲದೆ ಇದ್ದರು, ಗಂಡ ಬಿಪುಲ್ ಬವಾಲಿ ಬಡಗಿ ಮತ್ತು ದಿನಗೂಲಿ ನೌಕರರಾಗಿದ್ದು, ಉತ್ತರ ಬಂಗಾಳದಲ್ಲಿ ಭಾರಿ ಮಳೆಯಿಂದಾಗಿ ಎಷ್ಟೇ ಹುಡುಕಿದರೂ ಕೆಲಸ ಸಿಕ್ಕಿರಲಿಲ್ಲ. ಹೀಗಾಗಿ ಚಿಂತಿತರಾಗಿದ್ದರು. ಗಂಡ ಕೆಲಸ ಹುಡುಕಿಕೊಂಡು ಹೊರಗೆ ಹೋಗಿದ್ದಾಗ ಪತ್ನಿ ಈ ದುಡುಕಿನ ನಿರ್ಧಾರ ಮಾಡಿದ್ದಾರೆ.
ಮನೆಯಲ್ಲಿ ಅಡುಗೆ ಸಾಮಗ್ರಿಗಳೆಲ್ಲಾ ಖಾಲಿಯಾಗಿತ್ತು, ಹಸಿದ ಮಗು ದಿನವಿಡೀ ಅಳುತ್ತಿತ್ತು. ತಾಯಿಗೆ ಏನು ಮಾಡಬೇಕು ಎಂಬುದೇ ತೋಚಲಿಲ್ಲ. ಹಾಗಾಗಿ ಮಗು ಬದುಕಿದ್ದರೆ ತನಗೆ ಆ ಮಗುವಿನ ಹೊಟ್ಟೆ ತುಂಬಿಸುವ ಶಕ್ತಿಯೂ ಇಲ್ಲ ಎಂದು ಭಾವಿಸಿ ತಪ್ಪು ನಿರ್ಧಾರ ಮಾಡಿದ್ದರು. ಆದರೆ ಮಹಿಳೆ ಹೇಳುವ ಪ್ರಕಾರ, ತಾನು ಮಗುವನ್ನು ಹೆದರಿಸುವ ಉದ್ದೇಶದಿಂದ ಎಸೆದಿದ್ದೆ ಕೊಲ್ಲುವ ಆಲೋಚನೆ ಇರಲಿಲ್ಲ ಎಂದಿದ್ದಾರೆ. ಪಲ್ಲವಿ ಕೀರ್ತಾನಿಯಾ ಮತ್ತು ಮಲ್ಲಿಕಾ ಪಾಲ್ ಎಂಬ ಇಬ್ಬರು ಮಗುವನ್ನು ರಕ್ಷಿಸಿದ್ದಾರೆ.ನದಿಯಲ್ಲಿ ನೀರು ಉಕ್ಕುತ್ತಿತ್ತು. ಹೇಗೋ ಸಾಹಸ ಮಾಡಿ ಮಗುವನ್ನು ಹೊರಕ್ಕೆ ತೆಗೆದಿದ್ದಾರೆ.
ಸೀಮಾ ಮಗುವನ್ನು ಕಸಿದುಕೊಳ್ಳಲು ಪ್ರಯತ್ನಿಸಿದಾಗ ಅಲ್ಲಿದ್ದ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದರು. ಪೊಲೀಸರು ಶೀಘ್ರದಲ್ಲೇ ಸ್ಥಳಕ್ಕೆ ಆಗಮಿಸಿ, ಉದ್ವಿಗ್ನತೆಯನ್ನು ಶಾಂತಗೊಳಿಸಿ ಹೇಳಿಕೆಗಳನ್ನು ದಾಖಲಿಸಿಕೊಂಡರು. ಮನೆಯಲ್ಲಿ ಆಹಾರದ ಕೊರತೆ ಇದೆ. ಮಗುವಿಗೆ ಕುಡಿಯಲು ಹಾಲು ಇಲ್ಲ. ಬೆಳಗ್ಗೆಯಿಂದ ಅಳುತ್ತಿತ್ತು. ಮಗು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನದಿಗೆ ಎಸೆಯಲು ಬಯಸಿದ್ದೆ ಎಂದು ಪೊಲೀಸರೆದುರು ಒಪ್ಪಿಕೊಂಡಿದ್ದಾಳೆ.