Monday, October 13, 2025

ಫ್ಲೋರಿಡಾ ಕರಾವಳಿಗೆ ‘ಎರಿನ್‌’ ಚಂಡಮಾರುತ ಲಗ್ಗೆ: ಟರ್ಕ್ಸ್ ಮತ್ತು ಕೈಕೋಸ್ ದ್ವೀಪಗಳಿಗೆ ಹೈ ಅಲರ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಅಮೆರಿಕ ಈ ಬಾರಿ ಗಂಟೆಗೆ 14 ಮೈಲು ವೇಗದಲ್ಲಿ ಚಲಿಸುತ್ತಿರುವ ಎರಿನ್‌ ಚಂಡಮಾರುತದ ಅಪಾಯ ಎದುರಿಸಲು ಸಜ್ಜಾಗಿದೆ. ಕ್ಲಾಸ್‌ 5 ಮಟ್ಟ ತಲುಪಿರುವ ಎರಿನ್‌ ಚಂಡಮಾರುತ, ಈಗಾಗಲೇ ಪೋರ್ಟೊ ರಿಕೊದಿಂದ ಸುಮಾರು 150 ಮೈಲುಗಳಷ್ಟು ಉತ್ತರಕ್ಕೆ ಚಲಿಸುತ್ತಿದ್ದು, ಕ್ರಮೇಣ ಉತ್ತರಕ್ಕೆ ತಿರುವು ಪಡೆಯುವ ನಿರೀಕ್ಷೆ ಇದೆ. ಫ್ಲೋರಿಡಾದಲ್ಲಿ ಎರಿನ್‌ ಚಂಡಮಾರುತದ ಪ್ರಭಾವ ಕಡಿಮೆ ಎಂದು ಹೇಳಲಾಗಿದ್ದರೂ, ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಚಂಡಮಾರುತದ ಕಾರಣಕ್ಕೆ ಭಾರೀ ಮಳೆ ಮತ್ತು ಗಾಳಿ ಈಗಾಗಲೇ ಪೋರ್ಟೊ ರಿಕೊ ಮತ್ತು ವರ್ಜಿನ್ ದ್ವೀಪಗಳಿಗೆ ಅಪ್ಪಳಿಸಿದೆ. ಬಿರುಗಾಳಿ ಮತ್ತು ಭಾರೀ ಮಳೆಯ ಕಾರಣಕ್ಕೆ ಟರ್ಕ್ಸ್ ಮತ್ತು ಕೈಕೋಸ್ ದ್ವೀಪಗಳಿಗೆ ಉಷ್ಣವಲಯದ ಚಂಡಮಾರುತದ ಎಚ್ಚರಿಕೆ ಜಾರಿ ಮಾಡಲಾಗಿದೆ.

ಭಾನುವಾರ ತಡರಾತ್ರಿಯಿಂದ ಸೋಮವಾರದವರೆಗೆ ಟರ್ಕ್ಸ್ ಮತ್ತು ಕೈಕೋಸ್ ದ್ವೀಪಗಳು ಮತ್ತು ಆಗ್ನೇಯ ಬಹಾಮಾಸ್‌ನ ಪೂರ್ವಕ್ಕೆ ,ಎರಿನ್‌ ಚಂಡಮಾರುತ ಹಾದುಹೋಗುವ ನಿರೀಕ್ಷೆಯಿದೆ. ಮಂಗಳವಾರ ಚಂಡಮಾರುತವು ಕ್ರಮೇಣ ಉತ್ತರಕ್ಕೆ ತಿರುವು ಪಡೆಯುವ ನಿರೀಕ್ಷೆ ಇದ್ದು, ಎರಿನ್‌ ಫ್ಲೋರಿಡಾ ಅಥವಾ ಆಗ್ನೇಯ ಅಮೆರಿಕಕ್ಕೆ ಪ್ರವೇಶಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ. 2024ರಲ್ಲಿ ಫ್ಲೋರಿಡಾದ ಕರಾವಳಿಗೆ ಭೀಕರ ಮಿಲ್ಟನ್‌ ಚಂಡಮಾರುತ ಅಪ್ಪಳಿಸಿತ್ತು.

ಚಂಡಮಾರುತದ ಪರಿಣಾಮ ಬಲವಾದ ಗಾಳಿಯು ಪ್ರಸ್ತುತ ಕೇಂದ್ರದಿಂದ 25 ಮೈಲುಗಳವರೆಗೆ ಹೊರಕ್ಕೆ ವಿಸ್ತರಿಸುತ್ತಿದೆ. ಆದರೆ ಉಷ್ಣವಲಯದ ಚಂಡಮಾರುತ-ಬಲದ ಗಾಳಿಯು ಸುಮಾರು 205 ಮೈಲುಗಳನ್ನು ತಲುಪಲಿದೆ ಎಂದು ಅಮೆರಿಕನ್‌ ಮಾಧ್ಯಮಗಳು ವರದಿ ಮಾಡಿವೆ. 2024ರಲ್ಲಿ ಫ್ಲೋರಿಡಾ ಕಡಲ ತೀರಕ್ಕೆ ಡೆಬ್ಬಿ ಚಂಡಮಾರುತ ಅಪ್ಪಳಿಸಿತ್ತು.

error: Content is protected !!