ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಮೋಸಾ ತರದಿದ್ದಕ್ಕೆ ಪತ್ನಿ ಮತ್ತು ಆಕೆಯ ಸಂಬಂಧಿಕರು ವ್ಯಕ್ತಿಯೊಬ್ಬನನ್ನು ಥಳಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕೊಲೆ ಯತ್ನದ ಆರೋಪದ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಆನಂದಪುರದ ನಿವಾಸಿ ಶಿವಂ ಮೇಲೆ ಆತನ ಪತ್ನಿ ಸಂಗೀತಾ, ಆಕೆಯ ಪೋಷಕರು ಉಷಾ, ರಾಮ್‌ಲಡೈಟ್ ಮತ್ತು ಮಾವ ರಾಮೋತಾರ್ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಶಿವಂ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಂಗೀತಾ ತನ್ನ ಪತಿಗೆ ಸಮೋಸಾ ತರಲು ಹೇಳಿದ್ದಾಳೆ. ಆದರೆ, ಪತಿ ತರುವುದಕ್ಕೆ ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ಪತ್ನಿ ತನ್ನ ಕುಟುಂಬದವರಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದಾಳೆ. ಮಾರನೇ ದಿನ ಪತಿ-ಪತ್ನಿ ನಡುವೆ ರಾಜಿ ಪಂಚಾಯಿತಿ ವೇಳೆ ಹಲ್ಲೆ ನಡೆಸಲಾಗಿದೆ.
ಘಟನೆಯ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಮಾಡಿದವರನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.
ಹಲ್ಲೆಗೊಳಗಾದ ವ್ಯಕ್ತಿಯ ತಾಯಿ ವಿಜಯ್ ಕುಮಾರಿ ನೀಡಿದ ದೂರಿನ ಆಧಾರದ ಮೇಲೆ, ಕೊಲೆ ಯತ್ನ ಸೇರಿದಂತೆ ಬಿಎನ್‌ಎಸ್ ಅಡಿಯಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವೃತ್ತ ಅಧಿಕಾರಿ (ಸಿಒ) ಪುರನ್‌ಪುರ ಪ್ರತೀಕ್ ದಹಿಯಾ ತಿಳಿಸಿದ್ದಾರೆ.