ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಬಂದಾದಲ್ಲಿ ಪತ್ನಿಯೊಂದಿಗೆ ಜಗಳವಾಡಿದ ನಂತರ ಪತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
28 ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿಯೊಂದಿಗಿನ ಕೌಟುಂಬಿಕ ಕಲಹದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಸ್ಥಳೀಯ ನಿವಾಸಿಗಳನ್ನು ಆಘಾತಗೊಳಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಮೃತನನ್ನು ಶಾಂತಿನಗರ ಪ್ರದೇಶದ ನಿವಾಸಿ ಶುಭಂ ಎಂದು ಗುರುತಿಸಲಾಗಿದ್ದು, ಅವರು ಪೇಂಟ್ ಮಾಡುತ್ತಾ ಜೀವನೋಪಾಯಕ್ಕಾಗಿ ಸಂಪಾದಿಸುತ್ತಿದ್ದರು.
ಶುಭಂ ಅವರ ತಾಯಿ ಮುನ್ನಿ ದೇವಿ ಪೊಲೀಸರಿಗೆ ನೀಡಿರುವ ಮಾಹಿತಿಯ ಪ್ರಕಾರ, ಮನೆಗೆ ಬಂದ ನಂತರ ಅವರ ಮಗ ಪತ್ನಿಗೆ ಮೊಟ್ಟೆ ಕರಿ ಮಾಡಲು ಹೇಳಿದಾಗ ಅವರು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಶುಭಂ ಹೊರಗಿನಿಂದ ಆಹಾರ ತಂದಿದ್ದರು. ಅದನ್ನು ಅವರ ಪತ್ನಿ ತಿನ್ನಲು ನಿರಾಕರಿಸಿದರು. ನಂತರ, ಹೆಂಡತಿ ಬಳಿ ಮೊಟ್ಟೆ ಕರಿ ಮಾಡುವಂತೆ ಹೇಳಿದ್ದಾರೆ. ಆದರೆ, ಆಕೆ ಮಾಡಲಿಲ್ಲ. ಹೀಗಾಗಿ ತನ್ನ ಮಗನೇ ಮೊಟ್ಟೆ ಕರಿ ತಯಾರಿಸಿದ. ಸ್ವಲ್ಪ ಸಮಯದ ನಂತರ, ಇಬ್ಬರ ನಡುವೆ ಜಗಳವಾಯಿತು ಎಂದು ಅವರು ಹೇಳಿದರು.
ಈ ಭಿನ್ನಾಭಿಪ್ರಾಯವು ಉಲ್ಬಣಗೊಂಡಿತು. ವಾದದ ಸಮಯದಲ್ಲಿ ಪತ್ನಿ ಬೀದಿಗೆ ಬಂದು ರಂಪಾಟ ಮಾಡಿದ್ದಾಳೆ. ಮುನ್ನಿ ದೇವಿ ಅವರು ತಮ್ಮ ಮಗ ಮತ್ತು ಆಕೆಯನ್ನು ಮನೆಯೊಳಗೆ ಕರೆತಂದರು ಎಂದು ಹೇಳಿದರು. ಜಗಳ ಸಾರ್ವಜನಿಕವಾಗಿ ನಡೆಯಿತು. ಇದರಿಂದ ತನ್ನ ಮಗನಿಗೆ ತೀವ್ರ ಅವಮಾನವಾಯಿತು ಎಂದು ಅವರು ಆರೋಪಿಸಿದ್ದಾರೆ.
ಕುಟುಂಬದ ಪ್ರಕಾರ, ಶುಭಂ ತೀವ್ರ ಮಾನಸಿಕ ಒತ್ತಡದಲ್ಲಿದ್ದರು. ನೆರೆಹೊರೆಯವರು ಮತ್ತು ಸಮುದಾಯದ ದೃಷ್ಟಿಯಲ್ಲಿ ಅವರ ಗೌರವಕ್ಕೆ ಧಕ್ಕೆಯಾಗಿದೆ ಎಂದು ಬೇಸರ ಮಾಡಿಕೊಂಡಿದ್ದ ಎನ್ನಲಾಗಿದೆ. ಅವಮಾನವಾಯಿತು ಎಂಬ ಬೇಸರದಿಂದ ಶುಭಂ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತನ ತಾಯಿ ಮುನ್ನಿ ದೇವಿಯು ತಮ್ಮ ಸೊಸೆ ಆಗಾಗ ಜಗಳಗಳನ್ನು ಪ್ರಚೋದಿಸುತ್ತಿದ್ದಳು ಎಂದು ಆರೋಪಿಸಿದರು. ದಂಪತಿಗಳು ಕಳೆದ ವರ್ಷ ಏಪ್ರಿಲ್‌ನಲ್ಲಿ ಮದುವೆಯಾಗಿದ್ದರು. ವಿವಾಹವಾಗಿ ಇನ್ನೂ ಒಂದು ವರ್ಷವಾಗಿಲ್ಲ. ಅಷ್ಟರಲ್ಲಾಗಲೇ ಮಗ ದುಡುಕಿನ ನಿರ್ಧಾರ ತೆಗೆದುಕೊಂಡ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.



