ಹೊಸದಿಗಂತ ಡಿಜಿಟಲ್ ಡೆಸ್ಕ್:
ತನನ್ನು ನೋಡಲು ಪತಿ ಬಾರದಕ್ಕೆ ಕೋಪಗೊಂಡಿದ್ದ ಮಹಿಳೆಯೊಬ್ಬರು 45 ದಿನಗಳ ಹಸುಗೂಸನ್ನು ಬಿಸಿನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆಯೊಂದು ನೆಲಮಂಗಲ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ನಾಗಕಲ್ಲು ಗ್ರಾಮದಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದೆ.
ರಾಧಾ (25) ಮಗುವನ್ನು ಹತ್ಯೆ ಮಾಡಿದ ತಾಯಿ. ಮಹಿಳೆ ತಾಯಿ ಮನೆಯಲ್ಲಿದ್ದಳು. ದಂಪತಿ ನಾಗಕಲ್ಲು ಗ್ರಾಮದ ನಿವಾಸಿಗಳಾಗಿದ್ದು, ಪವನ್ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಈತ ಮನೆ ನಿಭಾಯಿಸಲು ಸಾಧ್ಯವಾಗದೇ ಕುಡಿತದ ಚಟಕ್ಕೆ ಬಿದ್ದಿದ್ದ.
ಇನ್ನು ಮಗು ಅವಧಿ ಪೂರ್ವವಾಗಿ ಜನಿಸಿದೆ, ಮಗು ಒಂದು ತಿಂಗಳಿಂದ ಹಾಲು ಕುಡಿಯುತ್ತಿರಲಿಲ್ಲ. ಮಗು ಸಹಜವಾಗಿಲ್ಲ ಎಂದು ರಾಧಾ ಭಾವಿಸಿದ್ದು, ಹೆರಿಗೆಯ ಬಳಿಕ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ.
ಒಂದೆಡೆ ತನ್ನನ್ನು ನೋಡಲು ಬಾರದ ಪತಿ, ಮತ್ತೊಂದೆಡೆ ಹಾಲು ಕುಡಿಯದೆ ಮಗು ದೀರ್ಘ ಕಾಲ ಅಳುತ್ತಿದ್ದ ಹಿನ್ನೆಲೆಯಲ್ಲಿ ಖಿನ್ನತೆಗೊಳಗಾಗಿದ್ದ ರಾಧಾ, ಹಂಡೆಯ ಒಲೆಗೆ ಬೆಂಕಿ ಹಾಕಿ, ಬಿಸಿ ನೀರು ಕಾಯಿಸಿ ಮಗುವನ್ನು ಹಾಕಿ ಸಾಯಿಸಿದ್ದಾಳೆ.
ಬಳಿಕ ಮಗುವನ್ನು ಅಪಹರಿಸಿದ್ದಾರೆಂದು ನಾಟಕವಾಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ನೀರಿನ ಪಾತ್ರೆಯಲ್ಲಿ ಮಗುವಿನ ಶವ ಪತ್ತೆಯಾಗಿದೆ. ಪ್ರಕರಣ ಸಂಬಂಧ ಪೊಲೀಸರು ರಾಧಾ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಿಳೆ ಪ್ರಸವಾನಂತರದ ಖಿನ್ನತೆಯಿಂದ ಬಳಲುತ್ತಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.