ಪತ್ನಿಗೆ ಬಂದ ಉಡುಗೊರೆಯ ಮೇಲೆ ಪತಿಗೆ ಯಾವುದೇ ಹಕ್ಕು ಇರುವುದಿಲ್ಲ: ಹೈಕೋರ್ಟ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದುವೆ, ಶುಭ ಸಮಾರಂಭದಲ್ಲಿ ಮಹಿಳೆಯರಿಗೆ ಸಿಗುವ ಉಡುಗೊರೆಗಳ ಮೇಲೆ ಗಂಡ ಅಥವಾ ಅವರ ಮನೆಯವರಿಗೆ ಯಾವುದೇ ಹಕ್ಕು ಇರುವುದಿಲ್ಲ ಎಂದು ಹೈಕೋರ್ಟ್‌ ಮಹತ್ವದ ತೀರ್ಪನ್ನು ನೀಡಿದೆ.

ಭಾರತೀಯ ಸಂಪ್ರದಾಯದಲ್ಲಿ ಎಲ್ಲ ಜಾತಿ, ಧರ್ಮಗಳಲ್ಲಿಯೂ ಮದುವೆ ಸೇರಿ ಇನ್ನಿತರೆ ಶುಭ ಸಮಾರಂಭಗಳಲ್ಲಿ ಉಡುಗೊರೆ ಕೊಡುವುದು ತೀರಾ ಸಾಮಾನ್ಯ. ಆದರೆ, ಹೀಗೆ ಉಡುಗೊರೆಯಾಗಿ ಸಿಕ್ಕ ವಸ್ತುಗಳ ಮೇಲೆ ಗಂಡ- ಹೆಂಡತಿ ಇಬ್ಬರಿಗೂ ಅಧಿಕಾರ ಇರುತ್ತದೆ ಎಂದು ನಾವು ತಿಳಿದುಕೊಂಡಿರುತ್ತೇವೆ. ಆದರೆ, ನಮ್ಮ ಊಹೆ ತಪ್ಪಾಗಿದೆ. ಮದುವೆ ಅಥವಾ ಇನ್ನಿತರ ಸಮಾರಂಭಗಳಲ್ಲಿ ಹೆಂಡತಿ ಅಥವಾ ಪತ್ನಿಗೆ ಬಂದ ಉಡುಗೊರೆಗಳ ಮೇಲೆ ಸಂಪೂರ್ಣವಾಗಿ ಆಕೆಗೇ ಹಕ್ಕು ಇರುತ್ತದೆ ಎಂದು ಛತ್ತೀಸ್‌ಗಢ ಹೈಕೋರ್ಟ್‌ ಮಹತ್ತರವಾದ ತೀರ್ಪನ್ನು ನೀಡಿದೆ.

ಛತ್ತೀಸ್‌ಗಢ ಹೈಕೋರ್ಟ್ ಇತ್ತೀಚೆಗೆ ಸ್ತ್ರಿಧಾನ್ (ಉಡುಗೊರೆ) ಪ್ರಕರಣದಲ್ಲಿ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ವಿವಾಹದ ಮೊದಲು ಅಥವಾ ನಂತರ, ನಿಶ್ಚಿತಾರ್ಥ ಅಥವಾ ವಿದಾಯ ಸಂದರ್ಭದಲ್ಲಿ ಮಹಿಳೆಗೆ ಉಡುಗೊರೆಯಾಗಿ ನೀಡಿದ ಆಸ್ತಿಯು ಆಕೆಯ ಸ್ವಂತದ್ದಾಗಿದೆ. ಅವಳ ಸಂತೋಷಕ್ಕಾಗಿ ಅದನ್ನು ಖರ್ಚು ಮಾಡುವ ಹಕ್ಕಿದೆ. ಅದರ ಮೇಲೆ ಗಂಡನಿಗೆ ಹಕ್ಕಿಲ್ಲ ಎಂದು ಆದೇಶಿಸಿದೆ.

ಛತ್ತೀಸ್‌ಗಢ ರಾಜ್ಯದ ಅಂಬಿಕಾಪುರ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನದ ಪ್ರಕರಣ ದಾಖಲಾಗಿತ್ತು. ಮದುವೆಯಾಗಿ ಕೆಲವು ವರ್ಷಗಳ ಸಂಸಾರ ನಡೆಸಿದ್ದ ಪತಿ-ಪತ್ನಿ ಇಬ್ಬರೂ ವಿವಾಹ ವಿಚ್ಛೇದನ ಪಡೆದಿದ್ದರು. ಈ ವೇಳೆ ತನಗೆ ಉಡುಗೊರೆಯಾಗಿ ಬಂದಿದ್ದ ಆಸ್ತಿ ಮತ್ತು ವಸ್ತುಗಳನ್ನು ಗಂಡನ ಮನೆಯಿಂದ ಹಿಂದಿರುಗಿಸುವಂತೆ ಮಹಿಳೆ ಕೇಳಿಕೊಂಡಿದ್ದರು. ಆದರೆ ಇದನ್ನು ತಿರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯ ಪತಿಯ ಪರವಾಗಿ ತೀರ್ಪು ನೀಡಿ ಆದೇಶ ಹೊರಡಿಸಿತ್ತು.

ಈ ತೀರ್ಪಿನ ವಿರುದ್ಧ ಮಹಿಳೆ 2021ರ ಡಿಸೆಂಬರ್‌ ವೇಳೆ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ತ್ರಿಸದಸ್ಯ ಪೀಠವು, ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ತಳ್ಳಿಹಾಕಿದೆ. ಜೊತೆಗೆ, ಪತ್ನಿಗೆ ಬಂದ ಉಡುಗೊರೆಯ ಮೇಲೆ ಪತಿಗೆ ಯಾವುದೇ ಹಕ್ಕು ಇರುವುದಿಲ್ಲ ಎಂದು ಮಹತ್ವದ ನಿರ್ಧಾರವನ್ನ ಹೊರಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!