ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಮೀರತ್‌ನಲ್ಲಿ ಆಘಾತಕಾರಿ ಘಟನೆ ನಡೆದಿದ್ದು,ವ್ಯಕ್ತಿಯೊಬ್ಬ ತನ್ನ 7 ತಿಂಗಳ ಗರ್ಭಿಣಿ ಪತ್ನಿಯನ್ನು ಇರಿದು ಕೊಂದಿದ್ದಾನೆ.
ನಂತರ ತಾನೇ ಪೊಲೀಸರಿಗೆ ಕರೆ ಮಾಡಿ, ಹೆಂಡತಿಯನ್ನು ಕೊಂದಿದ್ದ ರೂಂನೊಳಗೆ ಹೋಗಿ ಬೀಗ ಹಾಕಿಕೊಂಡಿದ್ದಾನೆ. ಪೊಲೀಸರು ಬರುವವರೆಗೂ ಹೆಂಡತಿಯ ಶವದ ಪಕ್ಕದಲ್ಲೇ ಕಾದು ಕುಳಿತಿದ್ದಾನೆ. ಕೊಲೆ ಮಾಡಿದ ಆರೋಪಿಯನ್ನು ರವಿಶಂಕರ್ ಎಂದು ಗುರುತಿಸಲಾಗಿದೆ. 7 ತಿಂಗಳ ಗರ್ಭಿಣಿಯಾದ 20 ವರ್ಷದ ಪತ್ನಿ ಸಪ್ನಾ ಜೊತೆ ಜಗಳವಾಡಿದ ನಂತರ ಆಕೆಯನ್ನು ಕೊಂದಿದ್ದಾನೆ.
ಈ ವರ್ಷದ ಜನವರಿಯಲ್ಲಿ ರವಿ ಮತ್ತು ಸಪ್ನಾ ಮದುವೆಯಾಗಿದ್ದರು. ಆದರೆ ನಂತರ ಆಕೆಯ ಪತಿಯೊಂದಿಗೆ ಆಗಾಗ ಜಗಳವಾಗುತ್ತಲೇ ಇತ್ತು. ಈ ಮಧ್ಯೆ ಆಕೆ 7 ತಿಂಗಳ ಗರ್ಭಿಣಿಯಾಗಿದ್ದಳು. 2 ದಿನಗಳ ಹಿಂದೆ ಆಕೆ ಗಂಡನ ಜೊತೆ ಜಗಳವಾಡಿ ಅಮ್ಹೇರಾ ಗ್ರಾಮದಲ್ಲಿರುವ ತನ್ನ ತಂಗಿ ಪಿಂಕಿಯ ಮನೆಗೆ ಹೋಗಿದ್ದಳು.
ಇಂದು ಬೆಳಿಗ್ಗೆ ರವಿ ಸಪ್ನಾಳನ್ನು ಭೇಟಿಯಾಗಲು ಅವಳಿದ್ದ ಆಕೆಯ ತಂಗಿ ಮನೆಗೆ ಹೋಗಿದ್ದ. ಮಾತನಾಡುವ ಸಲುವಾಗಿ ರವಿಶಂಕರ್ ಮತ್ತು ಸಪ್ನಾ ಮನೆಯ ಮೊದಲ ಮಹಡಿಗೆ ಹೋಗಿ ಬಾಗಿಲು ಹಾಕಿಕೊಂಡರು. ಇಬ್ಬರೂ ರೂಂಗೆ ಹೋದ ಕೆಲವೇ ಕ್ಷಣಗಳಲ್ಲಿ ಕಿರುಚಾಟ ಕೇಳಲು ಪ್ರಾರಂಭಿಸಿತು.
ಸಪ್ನಾ ತನ್ನ ಜೀವ ಉಳಿಸಿಕೊಳ್ಳಲು ಬೇಡಿಕೊಳ್ಳುತ್ತಿರುವುದು ಕೇಳಿಬಂದಿತು ಎಂದು ಅಕ್ಕಪಕ್ಕದವರು ಹೇಳಿದ್ದಾರೆ. ಆದರೆ ರವಿ ಕೋಪದಿಂದ ಅವಳಿಗೆ ಇರಿದಿದ್ದಾನೆ. ಸಪ್ನಾಳ ಕುಟುಂಬದ ಸದಸ್ಯರು ಮಧ್ಯಪ್ರವೇಶಿಸಲು ಪ್ರಯತ್ನಿಸಿದರು, ಆದರೆ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಸಪ್ನಾಳನ್ನು ಕೊಂದ ನಂತರ ರವಿ ಪೊಲೀಸರಿಗೆ ಕರೆ ಮಾಡಿ ಶವದ ಬಳಿ ಕುಳಿತು ಅಧಿಕಾರಿಗಳು ಬರುವವರೆಗೆ ಕಾಯುತ್ತಿದ್ದ. ಸ್ಥಳಕ್ಕೆ ಬಂದ ನಂತರ, ಸಪ್ನಾಳ ಗಂಟಲು ಸೀಳಿ ಆಕೆಗೆ ಹಲವು ಬಾರಿ ಇರಿದಿರುವುದು ಪೊಲೀಸರಿಗೆ ಕಂಡುಬಂದಿದೆ.