ಹೊಸದಿಗಂತ ವರದಿ ಹಾಸನ :
ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಪಾಳ್ಯ ಗ್ರಾಮದಲ್ಲಿ ಪತ್ನಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲ್ಲಲು ಯತ್ನಿಸಿದ್ದ ಭಯಾನಕ ಘಟನೆ ಬೆಳಕಿಗೆ ಬಂದಿದ್ದು, ಆಲೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ದ್ರಾಕ್ಷಾಯಿಣಿ ತನ್ನ ಪತಿ ಪ್ರತಾಪ್‌ರೊಂದಿಗೆ ಜೀವನ ನಡೆಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವಳಿಗೆ ಪ್ರವೀಣ್ ಎಂಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಬೆಳೆದಿದ್ದದ್ದು ತಿಳಿದು ಬಂದಿದೆ. ಈ ಸಂಬಂಧಕ್ಕೆ ಪತಿ ಪ್ರತಾಪ್ ಅಡ್ಡಿಯಾದ ಹಿನ್ನೆಲೆಯಲ್ಲಿ ಪತಿಯನ್ನು ಕೊಲ್ಲುಲು ದ್ರಾಕ್ಷಾಯಿಣಿ ಹಾಗೂ ಪ್ರವೀಣ್ ತಂತ್ರ ರೂಪಿಸಿದ್ದರು.
ಮೂಲಗಳ ಮಾಹಿತಿ ಪ್ರಕಾರ, ಅವರು ಮದ್ಯ ಮತ್ತು ಊಟದಲ್ಲಿ ವಿಷ ಹಾಕುತ್ತಾ ಪತಿಯನ್ನು ನಿಧಾನವಾಗಿ ಕೊಲ್ಲುವ ಯೋಜನೆ ರೂಪಿಸಿದ್ದರು. ಪ್ರತಾಪ್ ದೇಹದಲ್ಲಿ ವಿಷದ ಅಂಶಗಳು ಕಂಡುಬಂದ ಹಿನ್ನೆಲೆಯಲ್ಲಿ ವೈದ್ಯರು ಅನುಮಾನ ವ್ಯಕ್ತಪಡಿಸಿದ್ದರು. ಈ ಸಂಬಂಧವಾಗಿ ಪ್ರತಾಪ್ ತನ್ನ ಪತ್ನಿಯ ಮೇಲೆ ಅನುಮಾನ ಹೊಂದಿ, ಒಂದು ತಿಂಗಳ ಕಾಲ ಮನೆಯಲ್ಲೇ ವಾಯ್ಸ್ ರೆಕಾರ್ಡರ್ ಇಟ್ಟು ಪತ್ನಿಯ ಮಾತುಕತೆಗಳನ್ನು ರೆಕಾರ್ಡ್ ಮಾಡುತ್ತಿದ್ದ.
ಇದರಿಂದಾಗಿ ಪತ್ನಿಯ ದುಷ್ಕೃತ್ಯ ಹಾಗೂ ಪ್ರವೀಣ್‌ನ ಸಹಕಾರದ ವಿಷಯಗಳು ಬಯಲಾಗಿವೆ. ಪ್ರತಾಪ್ ತನ್ನದೇ ದೂರು ಆಧಾರವಾಗಿ ಪೊಲೀಸರು ತನಿಖೆ ಪ್ರಾರಂಭಿಸಿದ್ದು, ದ್ರಾಕ್ಷಾಯಿಣಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಈ ನಡುವೆ ಪ್ರವೀಣ್ ಎಸ್ಕೇಪ್ ಆಗಿರುವ ಕುರಿತು ವರದಿಯಾಗಿದೆ.
ಈ ಹೃದಯವಿದ್ರಾವಕ ಘಟನೆ ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸಾರ್ವಜನಿಕರಲ್ಲಿ ಭೀತಿಯ ವಾತಾವರಣ ಮೂಡಿಸಿದೆ. ಈ ಕುರಿತು ಪೊಲೀಸರು ಕ್ರಮ ಕೈಗೊಂಡಿದ್ದು ತನಿಖೆ ಕೈಗೊಳ್ಳಲಾಗಿದೆ.