ಹೊಸದಿಗಂತ ಬೆಳಗಾವಿ:
ತವರು ಮನೆಗೆ ಹೋಗುವ ವಿಷಯವಾಗಿ ದಂಪತಿಗಳ ನಡುವೆ ಉಂಟಾದ ಸಣ್ಣ ಮಾತಿನ ಚಕಮಕಿ ಕೊಲೆಯಲ್ಲಿ ಅಂತ್ಯವಾಗಿರುವ ಭೀಕರ ಘಟನೆ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ನಡೆದಿದೆ. 21 ವರ್ಷದ ರಾಜೇಶ್ವರಿ ಗಿಲಕ್ಕನವರ ಮೃತ ದುರ್ದೈವಿ. ಈ ಸಂಬಂಧ ಆರೋಪಿ ಪತಿ ಫಕ್ಕಿರಪ್ಪ ಬಸಪ್ಪ ಗಿಲಕ್ಕನವರನನ್ನು (28) ಪೊಲೀಸರು ಬಂಧಿಸಿದ್ದಾರೆ.
ಮೃತ ರಾಜೇಶ್ವರಿ ಹಾಗೂ ಫಕ್ಕಿರಪ್ಪನಿಗೆ ಮೂರು ವರ್ಷಗಳ ಹಿಂದೆ ವಿವಾಹವಾಗಿತ್ತು. ಆದರೆ ದಂಪತಿಗೆ ಮಕ್ಕಳಾಗಿರಲಿಲ್ಲ ಎಂಬ ಕಾರಣಕ್ಕೆ ಮನೆಯಲ್ಲಿ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಮಂಗಳವಾರ ರಾಜೇಶ್ವರಿಯ ತಮ್ಮನಿಗೆ ಗಾಯವಾಗಿದ್ದರಿಂದ, ಆತನನ್ನು ನೋಡಲು ತವರು ಮನೆಗೆ ಹೋಗುವುದಾಗಿ ಪತಿಯಲ್ಲಿ ಕೇಳಿಕೊಂಡಿದ್ದಳು. ಆದರೆ, “ಜಮೀನಿನಲ್ಲಿ ಕೆಲಸವಿದೆ, ಈಗ ಹೋಗುವುದು ಬೇಡ” ಎಂದು ಫಕ್ಕಿರಪ್ಪ ಪತ್ನಿಯನ್ನು ತಡೆದಿದ್ದಾನೆ.
ಈ ವಿಚಾರವಾಗಿ ಇಬ್ಬರ ನಡುವೆ ಮಂಗಳವಾರ ರಾತ್ರಿ ತೀವ್ರ ಗಲಾಟೆ ನಡೆದಿದೆ. ಜಗಳ ವಿಕೋಪಕ್ಕೆ ಹೋದ ಸಂದರ್ಭದಲ್ಲಿ ಆಕ್ರೋಶಗೊಂಡ ಫಕ್ಕಿರಪ್ಪ, ಹಗ್ಗದಿಂದ ಪತ್ನಿ ರಾಜೇಶ್ವರಿಯ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆಯೇ ಬೈಲಹೊಂಗಲ ಡಿವೈಎಸ್ಪಿ, ಕಿತ್ತೂರು ಸಿಪಿಐ ಹಾಗೂ ಬೈಲಹೊಂಗಲ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


