ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಂಡನ ಜೂಜಿನ ಚಟಕ್ಕೆ ಹೆಂಡತಿಯನ್ನೇ ಅಡವಿಟ್ಟು ಆಕೆಯ ಜೀವನವನ್ನೇ ಹಾಳು ಮಾಡಿರುವ ಘಟನೆ ಉತ್ತರ ಪ್ರದೇಶದ ಬಾಗ್ಪತ್ನಲ್ಲಿ ನಡೆದಿದೆ.
ಕಳೆದ ಅಕ್ಟೋಬರ್‌ನಲ್ಲಿ ಮೀರತ್‌ನ ಖಿವಾಯ್ ಗ್ರಾಮದ ಡ್ಯಾನಿಶ್ ಎಂಬಾತನನ್ನು ಮದುವೆಯಾಗಿದ್ದ ಮಹಿಳೆ, ಮದುವೆಯ ನಂತರ ಪತಿ ಹಾಗೂ ಅತ್ತೆ-ಮಾವರಿಂದ ನಿರಂತರ ದೈಹಿಕ ಹಿಂಸೆ, ವರದಕ್ಷಿಣೆಗಾಗಿ ಹಲ್ಲೆ ಮಾಡುತ್ತಿದ್ದರು. ಮದ್ಯಪಾನ ಹಾಗೂ ಜೂಜಿನಲ್ಲಿ ಮುಳುಗಿದ್ದ ಗಂಡ, ಕುಡಿದು ಬಂದು ಅವಳ ಮೇಲೆ ಹಲ್ಲೆ ಮಾಡುತ್ತಿದ್ದನು. ಪರಿಸ್ಥಿತಿ ವಿಪರೀತ ರೂಪ ಪಡೆದಿದ್ದು, ಡ್ಯಾನಿಶ್ ತನ್ನ ಹೆಂಡತಿಯನ್ನು ಜೂಜಿನಲ್ಲಿ ಪಣಕ್ಕಿಟ್ಟು ಜೂಜಿನಲ್ಲಿ ಸೋತ ನಂತರ ಪರ ಪುರುಷರೊಂದಿಗೆ ಮಲಗುವಂತೆ ಬಲವಂತ ಮಾಡಲಾಗುತ್ತಿತ್ತು ಎಂದು ಸಂತ್ರಸ್ತೆ ದೂರು ನೀಡಿದ್ದಾಳೆ.
ಉಮೇಶ್ ಗುಪ್ತಾ, ಮೋನು, ಅನ್ಶುಲ್ ಸೇರಿದಂತೆ ಎಂಟು ಮಂದಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆಂದು ಹೇಳಲಾಗಿದೆ. ಗಂಡನ ಅಣ್ಣ ಶಾಹಿದ್ ಮತ್ತು ಅತ್ತಿಗೆಯ ಪತಿ ಶೌಕೀನ್ ಕೂಡ ಹಲ್ಲೆ ಮತ್ತು ಅತ್ಯಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಮಹಿಳೆ ವಿವರಿಸಿದ್ದಾಳೆ. ಮಾವ ಯಾಮಿನ್ ಸಹ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಮದುವೆಯಿಂದಲೂ ಹಿಂಸೆ ಮುಂದುವರಿದಿದ್ದು, ಗರ್ಭಿಣಿಯೆಂದು ಹೇಳಿದಾಗ ಬಲವಂತವಾಗಿ ಗರ್ಭಪಾತ ಮಾಡಲಾಗಿದೆ. ಬಳಿಕ ಕಾಲಿಗೆ ಆ್ಯಸಿಡ್ ಸುರಿದು, ನದಿಗೆ ಎಸೆದು ಕೊಲ್ಲಲು ಯತ್ನಿಸಲಾಗಿತ್ತು. ದಾರಿಹೋಕರೊಬ್ಬರು ರಕ್ಷಿಸಿದ್ದು ಎನ್ನಲಾಗಿದೆ.
ಸಂತ್ರಸ್ತೆ ಬಾಗ್‌ಪತ್ ಎಸ್‌ಪಿ ಕಚೇರಿಯನ್ನು ಸಂಪರ್ಕಿಸಿ ನ್ಯಾಯ ಕೇಳಿದ್ದಾಳೆ. ದೂರು ದಾಖಲಾಗಿದ್ದು, ಪ್ರಕರಣ ತನಿಖೆಯಲ್ಲಿದೆ ಎಂದು ಪೊಲೀಸರು ಅಧಿಕೃತವಾಗಿ ತಿಳಿಸಿದ್ದಾರೆ.

