ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆ ಬಿಜೆಪಿ ಅಭ್ಯರ್ಥಿಗಳಾದ ಹೈದರಾಬಾದ್ನ ಕೊಂಪೆಲ್ಲಾ ಮಾಧವಿ ಲತಾ ಹಾಗೂ ಜೆಎಂಎಂ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಸೀತಾ ಸೊರೆನ್ ಅವರಿಗೆ ಕೇಂದ್ರ ಸರ್ಕಾರವು ವೈ ಪ್ಲಸ್ ಭದ್ರತೆ ಒದಗಿಸಿದೆ.
ಅಸಾದುದ್ದೀನ್ ಓವೈಸಿ ಎದುರು ಕೊಂಪೆಲ್ಲಾ ಮಾಧವಿ ಲತಾ ಅವರನ್ನು ಕಣಕ್ಕಿಳಿಸಲಾಗಿದ್ದು, ಅವರಿಗೆ ಬೆದರಿಕೆಯ ಇದೆ ಎಂದು ಕೇಂದ್ರ ಗುಪ್ತಚರ ಸಂಸ್ಥೆಗಳ ಗ್ರಹಿಕೆಯ ಹಿನ್ನೆಲೆಯಲ್ಲಿ ಈ ಭದ್ರತೆಯನ್ನು ಒದಗಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಮೀಸಲು ಪೊಲೀಸ್ ಪಡೆಯು ಬಿಜೆಪಿ ಅಭ್ಯರ್ಥಿಗಳಿಬ್ಬರಿಗೆ ವೈ ಪ್ಲಸ್ ಭದ್ರತೆಯನ್ನು ಒದಗಿಸಿದೆ. ವಿಐಪಿ ಭದ್ರತೆಯ ಭಾಗವಾಗಿ ಮಾಧವಿಲತಾ ಗೆ 11 ಸಿಆರ್ಪಿಎಫ್ ಪಡೆ ಸಿಬ್ಬಂದಿ ಕಾವಲು ಕಾಯಲಿದ್ದಾರೆ. ಮಾಧವಿಲತಾ ಅವರ ಮನೆಗೆ ಇನ್ನೂ ಐವರು ಶಸ್ತ್ರಸಜ್ಜಿತ ಸಿಬ್ಬಂದಿ ಭದ್ರತೆ ಒದಗಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಹೈದರಾಬಾದ್‌ನಲ್ಲಿ ಮಾಧವಿ ಲತಾ ಅವರು ನಿರಂತರ ಸಂಪರ್ಕ ಹೊಂದಿದ್ದು, ಹಿಂದು ಫೈರ್ ಬ್ರಾಂಡ್ ನಾಯಕಿ ಕೂಡ ಆಗಿದ್ದಾರೆ. ಓವೈಸಿ ವಿರುದ್ಧ ಸತತ ಹೋರಾಟ ಸಂಘಟಿಸುತ್ತಿರುವ ಮಾಧವಿ ಲತಾ ಅವರು ಈ ಬಾರಿ ಕಮಾಲ್ ಮಾಡಬಹುದು ಎನ್ನುವ ನಿರೀಕ್ಷೆಯನ್ನು ಬಿಜೆಪಿ ಹೊಂದಿದ್ದು, ಹೈದರಾಬಾದ್ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಂದ ಇರುವ ಓವೈಸಿ ಭದ್ರಕೋಟೆಯನ್ನು ಪುಡಿಗೊಳಿಸುತ್ತಾರಾ ಎಂದು ಕಾದು ನೋಡಬೇಕಿದೆ.
ಕಳೆದ 40 ವರ್ಷಗಳಿಂದ ಓಲ್ಡ್ ಸಿಟಿಯೂ ಕ್ಷೇತ್ರ ಓವೈಸಿ ಮನೆತನದ ಭದ್ರಕೋಟೆಯಾಗಿದೆ. ಚುನಾವಣಾ ಸಮಯದಲ್ಲಿ ಬಿಜೆಪಿ ಅಭ್ಯರ್ಥಿ ಮಾಧವಿ ಅವರಿಗೆ ಅಹಿತಕರ ಘಟನೆ ನಡೆಯದಂತೆ ಈ ಕ್ರಮ ಕೈಗೊಳ್ಳಲಾಗಿದೆ.
ಸೀತಾ ಸೊರೆನ್ ಗೂ ಭದ್ರತೆ
ಲೋಕಸಭೆ ಚುನಾವಣೆಗೂ ಮುನ್ನ ಜಾರ್ಖಂಡ್‌ನ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷದ ಸಂಸ್ಥಾಪಕ ಶಿಬು ಸೊರೆನ್ ಅವರ ಸೊಸೆ ಸೀತಾ, ಜೆಎಂಎಂ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು.
ತಮ್ಮ ಕುಟುಂಬದೊಂದಿಗೆ ತಮ್ಮನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಆರೋಪಿಸಿ ಸೀತಾ ಸೊರೆನ್ ಅವರು ಜೆಎಂಎಂಗೆ ರಾಜೀನಾಮೆ ಸಲ್ಲಿಸಿದ್ದರು. ಮಾಜಿ ಸಿಎಂ ಹೇಮಂತ್ ಸೊರೆನ್ ಅವರಿಗೆ ಪಕ್ಷದ ವೇದಿಕೆಗಳಲ್ಲಿ ಮಣೆ ಹಾಕುತ್ತಿರುವ ಬಗ್ಗೆ ಅವರು ಬೇಸರಗೊಂಡಿದ್ದರು. ನಂತರ ಬಿಜೆಪಿ ಸೇರ್ಪಡೆಯಾಗಿದ್ದರು.