ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ನಾತಕೋತ್ತರ ಪದವಿ ಓದಲು ಅಮೆರಿಕಕ್ಕೆ ಹೋದ ಭಾರತೀಯ ಮೂಲದ ವಿದ್ಯಾರ್ಥಿನಿ ಚಿಕಾಗೋದ ಬೀದಿಗಳಲ್ಲಿ ಪರದಾಡುವ ಪರಿಸ್ಥಿತಿ ಬಂದಿದೆ. ಈ ಕುರಿತು ಆಕೆಯ ತಾಯಿ ವಿದೇಶಾಂಗ ಸಚಿವ ಜೈ ಶಂಕರ್‌ಗೆ ಪತ್ರ ಬರೆದಿದ್ದು, ತನ್ನ ಮಗಳನ್ನು ವಾಪಸ್ ಭಾರತಕ್ಕೆ ಕರೆತರಲು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಹೈದರಾಬಾದ್ ಮೂಲದ ಸೈಯದಾ ಲುಲು ಮಿನ್ಹಾಜ್ ಝೈದಿ, ಮಾನಸಿಕ ಒತ್ತಡದಿಂದ ಬಳಲುತ್ತಿದ್ದು, ಚಿಕಾಗೋದ ಬೀದಿ ಬೀದಿಗಳಲ್ಲಿ ಓಡಾಡುತ್ತಿದ್ದಾರಂತೆ. ಆಕೆಯ ಸಾಮಾನುಗಳನ್ನು ಯಾರೋ ಕದ್ದಿದ್ದು, ತಿನ್ನಲು ಆಹಾರವಿಲ್ಲದಂತಾಗಿದೆ. ಈ ಕುರಿತು ಭಾರತ ರಾಷ್ಟ್ರ ಸಮಿತಿಯ ನಾಯಕ ಖಲೇಕರ್ ರೆಹಮಾನ್ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡ ನಂತರ ಪತ್ರವು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.
ಪತ್ರದಲ್ಲಿ ಸೈಯದಾ ಅವರ ತಾಯಿ ಮಗಳ ಕಷ್ಟವನ್ನು ವಿವರಿಸಿದ್ದಾರೆ. “ತೆಲಂಗಾಣದ ಮೌಲಾಲಿ ನಿವಾಸಿಯಾಗಿರುವ ನನ್ನ ಮಗಳು ಸೈಯದಾ ಲುಲು ಮಿನ್ಹಾಜ್ ಜೈದಿ ಅವರು ಆಗಸ್ಟ್ 2021ರಲ್ಲಿ ಡೆಟ್ರಾಯಿಟ್‌ನಲ್ಲಿರುವ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಅಧ್ಯಯನಕ್ಕೆ ಹೋಗಿದ್ದಾರೆ. ಅಲ್ಲಿಗೆ ಹೋದ ನಂತರ ನಮ್ಮೊಂದಿಗೆ ಆಗಾಗ್ಗೆ ಸಂಪರ್ಕದಲ್ಲಿರುತ್ತಿದ್ದಳು. ಆದರೆ ಕಳೆದ ಎರಡು ತಿಂಗಳಿನಿಂದ ಆಕೆ ನನ್ನ ಸಂಪರ್ಕದಲ್ಲಿಲ್ಲ, ನನ್ನ ಮಗಳು ಖಿನ್ನತೆಗೆ ಒಳಗಾಗಿದ್ದಾಳೆ, ಯಾರೋ ಆಕೆಯ ವಸ್ತುಗಳನ್ನು ಕದ್ದಿದ್ದು, ಅವಳು ಹಸಿವಿನಿಂದ ಬಳಲುತ್ತಿದ್ದಾಳೆ. ಹೈದರಾಬಾದಿನ ಇಬ್ಬರು ಯುವಕರ ಮೂಲಕ ಮಗಳ ಹೀನಾಯ ಸ್ಥಿತಿ ಬಗ್ಗೆ ನಮಗೆ ತಿಳಿಯಿತು. ಅಮೆರಿಕದ ಚಿಕಾಗೋ ಬೀದಿಗಳಲ್ಲಿ ನನ್ನ ಮಗಳು ಕಾಣಿಸಿಕೊಂಡಿದ್ದಾಳೆ ಎಂದು ಅವರು ಹೇಳಿದರು. ದಯವಿಟ್ಟು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಧ್ಯಸ್ಥಿಕೆ ವಹಿಸಿ ನನ್ನ ಮಗಳನ್ನು ಭಾರತಕ್ಕೆ ಕರೆತರಲಿ ಎಂದು ಸೈಯದಾ ತಾಯಿ ಮನವಿ ಮಾಡಿದರು.