ಹೊಸದಿಗಂತ ವರದಿ ಚಿತ್ರದುರ್ಗ
ಕಾಂಗ್ರೆಸ್ ಗೂಂಡಾ ವರ್ತನೆ ಖಂಡಿಸಿ ನಗರದಲ್ಲಿ ಬಿಜೆಪಿ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ವಿರುದ್ದದ ಪ್ರತಿಭಟನೆಯ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು. ಇದರಿಂದ ಕ್ಷಣಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಪರಸ್ಪರ ತಳ್ಳಾಟ, ನೂಕಾಟ ನಡೆಯಿತು.
ನಗರದ ಒನಕೆ ಓಬವ್ವ ವೃತ್ತದಲ್ಲಿ ಜಮಾವಣೆಗೊಂಡ ಬಿಜೆಪಿ ಕಾರ್ಯಕರ್ತರು ಒನಕೆ ಓಬವ್ವ ವೃತ್ತದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಕಾಂಗ್ರೆಸ್ ಪಕ್ಷ ಹಾಗೂ ಮುಖಂಡರ ವಿರುದ್ದ ಹರಿ ಹಾಯ್ದರು, ತದ ನಂತರ ಅಲ್ಲಿಂದ ಮೆರವಣಿಗೆಯ ಮೂಲಕ ರೋಟರಿ ಬಾಲಭವನ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ನಗರಠಾಣೆ ಮುಂಭಾಗದಿಂದ ಮಹಾವೀರ ವೃತ್ತ, ತಾಲ್ಲೂಕು ಕಚೇರಿ ವಾಸವಿ ವೃತ್ತವನ್ನು ಹಾದು ಮರಳಿ ಒನಕೆ ಓಬವ್ವ ವೃತ್ತಕ್ಕೆ ಆಗಮಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಯಾದವ್ ಕಾಂಗ್ರೆಸ್ ಕಚೇರಿಯತ್ತ ನುಗ್ಗಿದರು. ಇದನ್ನು ಗಮಿಸಿದ ಪೊಲೀಸರು ಕೂಡಲೇ ಅವರನ್ನು ತಡೆಯುವ ಪ್ರಯತ್ನ ಮಾಡಿದರು. ಆದರೂ ವೆಂಕಟೇಶ್ ಯಾದವ್ ಪೊಲೀಸರನ್ನು ತಳ್ಳಿಕೊಂಡು ಮುಂದೆ ಹೋದರು. ಈ ಸಮಯದಲ್ಲಿ ವೆಂಕಟೇಶ್ ಯಾದವ್ ಅವರ ಹಿಂದೆ ಇದ್ದ ಇತರೆ ಕಾರ್ಯಕರ್ತರು ಸಹ ಇವರನ್ನು ಹಿಂಬಾಲಿಸಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು.

ಈ ಸಮಯದಲ್ಲಿ ಬಿಜೆಪಿ ಕಾರ್ಯದರ್ಶಿ ರೇಖಾ ಕಾಂಗ್ರೆಸ್ ಕಚೇರಿಯತ್ತ ನುಗ್ಗಲು ಮುಂದಾದರು. ಇದನ್ನು ಗಮನಿಸಿದ ಮಹಿಳಾ ಪೊಲೀಸರು ಕೂಡಲೇ ಅವರನ್ನು ತಡೆಯುವ ಪ್ರಯತ್ನ ಮಾಡಿದರು. ಆದರೂ ಪಟ್ಟು ಬಿಡದ ಬಿಜೆಪಿ ಕಾರ್ಯಕರ್ತರು ರಸ್ತೆಯ ಮೇಲೆ ಬಿದ್ದು ಹೊರಳಾಡಿ ಕಾಂಗ್ರೆಸ್ ಕಚೇರಿಗೆ ನುಗ್ಗುವ ಪ್ರಯತ್ನ ಮಾಡಿದರು. ಬಿಜೆಪಿ ಕಾರ್ಯಕರ್ತರನ್ನು ಹಿಡಿದು ಎಳೆದೊಯುತ್ತಿದ್ದ ಪೊಲೀಲಿಸರ ಕೈಯಿಂದ ತಪ್ಪಿಸಿಕೊಂಡು ಬಂದು ಮತ್ತೆ ಕಾಂಗ್ರೆಸ್ ಕಚೇರಿಯತ್ತ ನುಗ್ಗಿದರು. ಇದಕ್ಕೆ ಪೋಲೀಸರು ಬಿಜೆಪಿ ಕಾರ್ಯಕರ್ತರನ್ನು ಬಲವಾಗಿ ಹಿಂದಕ್ಕೆ ತಳ್ಳಿದರು. ಇದರಿಂದ ಕೆರಳಿದ ಬಿಜೆಪಿ ಕಾರ್ಯಕರ್ತರು, ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಮುಖಂಡರ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:
ಇದರ ನಡುವೆ ಪ್ರತಿಭಟನಾಕಾರರು ಬಿತ್ತಿ ಪತ್ರಗಳನ್ನು ಕಾಂಗ್ರೆಸ್ ಕಚೇರಿಯತ್ತ ತೂರಿದರು. ಕಾಂಗ್ರೆಸ್ ಕಚೇರಿಯತ್ತ ನುಗ್ಗಲು ಬಿಜೆಪಿ ಕಾರ್ಯಕರ್ತರು ಪ್ರಯತ್ನಿಸುತ್ತಿದ್ದರೆ ಆದನ್ನು ತಡೆಯುವ ಕಾರ್ಯವನ್ನು ಪೋಲಿಸರು ಮಾಡುತ್ತಿದ್ದರು. ಬಿಜೆಪಿ ಕಾರ್ಯಕರ್ತರು ಹಾಗೂ ಪೋಲಿಸರ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದ ಕೆಲಕಾಳ ಗೊಂದಲ ವಾತಾವರಣ ನಿರ್ಮಾಣವಾಯಿತು.



