March 4, 2026
Wednesday, March 4, 2026
spot_img

ಬಸವಕಲ್ಯಾಣದಲ್ಲಿ ಹೈಡ್ರಾಮಾ: ಮೌಲ್ವಿಗಳ ಮೇಲೆ ಹಲ್ಲೆ ಆರೋಪ, ಪೊಲೀಸ್ ಠಾಣೆಗೆ ಸಾವಿರಾರು ಜನರ ಮುತ್ತಿಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾರ್ಚ್ 03ರ ತಡರಾತ್ರಿ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಠಾಣೆಯ ಮುಂಭಾಗ ಭಾರಿ ಹೈಡ್ರಾಮಾ ನಡೆದಿದೆ. ಮುಸ್ಲಿಂ ಮೌಲ್ವಿಗಳ ಮೇಲೆ ಹಿಂದೂ ಯುವಕರು ಹಲ್ಲೆ ನಡೆಸಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ, ಸಾವಿರಾರು ಮುಸ್ಲಿಂ ಯುವಕರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು.

ಮುಸ್ಲಿಂ ಮೌಲ್ವಿಗಳ ಮೇಲೆ ಹಲ್ಲೆ ನಡೆದಿದೆ ಎಂಬ ವಿಚಾರ ನಗರದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತು. ಇದರಿಂದ ಕೆರಳಿದ ಸಾವಿರಾರು ಸಮುದಾಯದ ಮುಖಂಡರು ಮತ್ತು ಯುವಕರು ನಗರದ ಗಾಂಧಿ ವೃತ್ತದಲ್ಲಿರುವ ಪೊಲೀಸ್ ಠಾಣೆಯತ್ತ ಧಾವಿಸಿದರು. ಹಲ್ಲೆಕೋರರನ್ನು ತಕ್ಷಣ ತಮ್ಮ ವಶಕ್ಕೆ ನೀಡಬೇಕು ಅಥವಾ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಮೈಕ್ ಮೂಲಕ ಶಾಂತಿ ಕಾಪಾಡುವಂತೆ ಮನವಿ ಮಾಡಿದರೂ, ಪ್ರತಿಭಟನಾಕಾರರು ಕಿವಿಗೊಡಲಿಲ್ಲ. “ಅಲ್ಲಾಹು ಅಕ್ಬರ್” ಎಂದು ಘೋಷಣೆಗಳನ್ನು ಕೂಗುತ್ತಾ, ಹಲ್ಲೆಕೋರರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪಟ್ಟು ಹಿಡಿದರು. ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಹಲ್ಲೆ ನಡೆಸಿದ ಆರೋಪ ಹೊತ್ತಿರುವ ಹಿಂದೂ ಯುವಕರ ಮೇಲೆ ಪ್ರಕರಣ ದಾಖಲಿಸಿಕೊಂಡರು.

ಪೊಲೀಸರು ಪ್ರಕರಣ ದಾಖಲಿಸಿದ ಬಳಿಕ ಮುಸ್ಲಿಂ ಸಮುದಾಯದವರು ಪ್ರತಿಭಟನೆಯನ್ನು ಹಿಂಪಡೆದರು. ಆದರೆ, ಅನುಮತಿ ಇಲ್ಲದೆ ಏಕಾಏಕಿ ಪ್ರತಿಭಟನೆ ನಡೆಸಿ ಸಾರ್ವಜನಿಕ ಶಾಂತಿಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಪೊಲೀಸರು 49 ಮುಸ್ಲಿಂ ಯುವಕರ ವಿರುದ್ಧವೂ ಸಹ ಪ್ರಕರಣ ದಾಖಲಿಸಿದ್ದಾರೆ. ಸದ್ಯ ನಗರದಲ್ಲಿ ಬಿಗುವಿನ ವಾತಾವರಣವಿದ್ದು, ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !