ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ನಂತರ ನಡೆದ ಹಿಂಸಾಚಾರದ ಪ್ರಕರಣಗಳು ಈಗ ನ್ಯಾಯಾಲಯದ ಮೆಟ್ಟಿಲೇರಿವೆ. ಈ ಮಧ್ಯೆ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮತ್ತು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವಕೀಲರ ಕೋಟ್ ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಹಾಜರಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಕೇವಲ ರಾಜಕಾರಣಿಯಲ್ಲ, ಅವರು ಕಾನೂನು ಪದವೀಧರರೂ ಹೌದು. 1982 ರಲ್ಲಿ ಜೋಗೇಶ್ ಚಂದ್ರ ಚೌಧರಿ ಕಾನೂನು ಕಾಲೇಜಿನಿಂದ ಪದವಿ ಪಡೆದಿದ್ದ ಅವರು, ಹಲವು ದಶಕಗಳ ಬಳಿಕ ಮತ್ತೆ ವಕೀಲರ ಉಡುಪಿನಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ರಾಜ್ಯದಲ್ಲಿ ನಡೆದ ಚುನಾವಣೋತ್ತರ ಹಿಂಸಾಚಾರದ ಕುರಿತಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯಲ್ಲಿ ಭಾಗವಹಿಸಲು ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಟಿಎಂಸಿ, “ಮಮತಾ ಬ್ಯಾನರ್ಜಿ ಅವರು ಬಂಗಾಳದ ಜನರ ಪರವಾಗಿ ನಿಲ್ಲುವ ತಮ್ಮ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಸತ್ಯ ಮತ್ತು ಸಾಂವಿಧಾನಿಕ ಮೌಲ್ಯಗಳ ರಕ್ಷಣೆಗಾಗಿ ಅವರು ಈ ಹೋರಾಟಕ್ಕಿಳಿದಿದ್ದಾರೆ,” ಎಂದು ಹೇಳಿದೆ. ಅಲ್ಲದೆ, ಬಿಜೆಪಿಯ ನಡೆಗಳನ್ನು ಟೀಕಿಸಿರುವ ಪಕ್ಷವು, ಅನ್ಯಾಯದ ವಿರುದ್ಧ ದೃಢವಾಗಿ ನಿಲ್ಲುವ ಏಕೈಕ ನಾಯಕಿ ದೀದಿ ಎಂದು ಬಣ್ಣಿಸಿದೆ.
ಮೇ 4 ರಂದು ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಪಶ್ಚಿಮ ಬಂಗಾಳದ ಹಲವು ಜಿಲ್ಲೆಗಳಲ್ಲಿ ಘರ್ಷಣೆ, ಲೂಟಿ ಮತ್ತು ಬಾಂಬ್ ದಾಳಿಗಳು ನಡೆದಿದ್ದವು. ಈ ಹಿಂಸಾಚಾರಕ್ಕೆ ಬಿಜೆಪಿ ಮತ್ತು ಟಿಎಂಸಿ ಪರಸ್ಪರ ದೂಷಣೆ ಮಾಡುತ್ತಲೇ ಬಂದಿವೆ. ಸದ್ಯ ಈ ಪ್ರಕರಣದ ಕಾನೂನು ಹೋರಾಟದಲ್ಲಿ ಮಮತಾ ಅವರೇ ಖುದ್ದಾಗಿ ವಾದ ಮಂಡಿಸಲು ಮುಂದಾಗಿರುವುದು ದೇಶದ ಗಮನ ಸೆಳೆದಿದೆ.



