ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)ಯ ತ್ರಿಭಾಷಾ ಸೂತ್ರದ ವಿಚಾರವಾಗಿ ಸಂಸತ್ ನಲ್ಲಿ ಕೇಂದ್ರ ಸರಕಾರ ಹಾಗು ವಿಪಕ್ಷಗಳ ಮಾತಿನ ಚರ್ಚೆ ನಡುವೆ ರಾಜ್ಯಸಭೆಯಲ್ಲಿ ಬುಧವಾರ ಸಂಸದೆ ಸುಧಾಮೂರ್ತಿ, ತ್ರಿಭಾಷಾ ಸೂತ್ರ ಮಕ್ಕಳಿಗೆ ಹಲವು ಭಾಷೆಗಳ ಕಲಿಕೆಗೆ ಪ್ರೋತ್ಸಾಹ ನೀಡುತ್ತದೆ ಎಂದು ಹೇಳುವ ಮೂಲಕ ಬೆಂಬಲ ಸೂಚಿಸಿದ್ದಾರೆ.
ಹಲವು ಭಾಷಾ ಕಲಿಕೆಯ ವಿಚಾರದಲ್ಲಿ ನಾನು ನಂಬಿಕೆ ಹೊಂದಿದ್ದೇನೆ. ನನಗೆ 7-8 ಭಾಷೆಗಳು ಗೊತ್ತು. ನಾನು ಈ ಕಲಿಕೆಯನ್ನು ಆಹ್ಲಾದಿಸಿದ್ದೇನೆ. ಮಕ್ಕಳು ಕೂಡ ಇದರ ಲಾಭ ಪಡೆಯಬಹುದು ಎಂದು ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ, ಕೇಂದ್ರ ಸರ್ಕಾರದ ತ್ರಿಭಾಷಾ ನೀತಿಗೆ ವಿರೋಧ ವ್ಯಕ್ತಪಡಿಸಿ, ತಮಿಳುನಾಡಿನಲ್ಲಿ ಎರಡು ಭಾಷೆ ನೀತಿ ಇದ್ದು, ಹಿಂದಿಯನ್ನು ಮೂರನೇ ಭಾಷೆಯಾಗಿ ಕಲಿಯುವಂತೆ ಕಡ್ಡಾಯ ಮಾಡುವುದು ಸ್ವೀಕರಾರ್ಹವಲ್ಲ. ದ್ವಿಭಾಷಾ ನೀತಿ ಕುರಿತು ತಮಿಳುನಾಡು ಸ್ಪಷ್ಟವಾಗಿದೆ. ಇಂಗ್ಲಿಷ್ ಜಾಗತಿಕವಾಗಿ ನಮ್ಮನ್ನು ಸಂಪರ್ಕಿಸುತ್ತದೆ. ತಮಿಳು ನಮ್ಮ ಸಂಸ್ಕೃತಿ ಮತ್ತು ಅಸ್ಮಿತೆಯಾಗಿದೆ. ಯಾರಾದರೂ ಇದೀಗ ಮೂರನೇ ಭಾಷೆ ಕಲಿಯಬೇಕು ಎಂದರೆ, ಅದು ಅವರ ಇಚ್ಛೆ. ಅದನ್ನು ಕಡ್ಡಾಯ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಮೂರನೇ ಭಾಷೆಯನ್ನು ಕಡ್ಡಾಯಗೊಳಿಸುವುದು ಸ್ವೀಕಾರಾರ್ಹವಲ್ಲ. ಕೇಂದ್ರ ಸರ್ಕಾರ ನೀತಿಗಳನ್ನು ಜಾರಿಗೊಳಿಸುವ ಬಗ್ಗೆ ಸರಾಗವಾಗಿರಬೇಕು ಎಂದರು.
ರಾಜ್ಯಸಭೆಯಲ್ಲಿ ಮಾತನಾಡಿದ ಕೇಂದ್ರ ಶಿಕ್ಷಣ ಸಚಿವರು, ಭಾಷೆ ಬಳಕೆ ಮೂಲಕ ಸರ್ಕಾರ ಸಮಾಜವನ್ನು ಇಬ್ಬಾಗ ಮಾಡಲು ಮುಂದಾಗಿದೆ ಎಂಬ ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದರು. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾಷೆಯನ್ನು ಇಂತಹ ಪಾಪ ಕಾರ್ಯಕ್ಕೆ ಎಂದಿಗೂ ಬಳಕೆ ಮಾಡುವುದಿಲ್ಲ ಎಂದರು.